ಸಿಂಧನೂರು: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ಸರ್ಕಾರಿ ಶಾಲೆ, ಹಾಸ್ಟೆಲ್, ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ಅಂಬಾದೇವಿ ದೇವಸ್ಥಾನದ ನೂತನ ಶಿಲಾ ಮಂಟಪ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ತೆರಳಿ ಪ್ರಗತಿಯನ್ನು ವೀಕ್ಷಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಾಲ್ಕು ತಿಂಗಳೊಳಗೆ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.
ನಂತರ ಸಾಲಗುಂದಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳ ಕುರಿತು ವೀಕ್ಷಿಸಿದ ಅವರು ಆಸ್ಪತ್ರೆಯಲ್ಲಿಯೇ ಔಷಧ ವಿತರಣೆ, ರಕ್ತ ಪರೀಕ್ಷೆ ಹಾಗೂ ಹೆರಿಗೆಯನ್ನು ನೆರವೇರಿಸಬೇಕು ಎಂದರು. ಈ ವೇಳೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ತಮಗೆ ಎರಡು ತಿಂಗಳ ಸಂಬಳ ಆಗಿಲ್ಲ ಎಂದು ಗಮನ ಸೆಳೆದರು. ಶೀಘ್ರ ಸಂಬಳ ಪಾವತಿಗೆ ಕ್ರಮವಹಿಸಲಾಗುವುದು ಎಂದು ನಿತೀಶ್ ಭರವಸೆ ನೀಡಿದರು.
ತದನಂತರ ಮಲ್ಕಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಕೊಠಡಿ, ಕುಡಿಯುವ ನೀರು, ಬಿಸಿಯೂಟ ಕೋಣೆ ವೀಕ್ಷಿಸಿದರು. ಗ್ರಂಥಾಲಯ ಹಾಗೂ ಅರ್ಧಕ್ಕೆ ನಿಂತ ಕಂಪೌಂಡ್ ಕಾಮಗಾರಿ ಪೂರ್ಣಗೊಳಿಸುವಂತೆ ಶಿಕ್ಷಕರು ಮನವಿ ಮಾಡಿದರು. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸುವಂತೆ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಸೂಚಿಸಿದರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ನೋಡುತ್ತಾ ಕುಳಿತಿದ್ದನ್ನು ಕಂಡು ‘ಪರೀಕ್ಷೆ ನಡೆಯುತ್ತಿದ್ದು, ಅದಕ್ಕಾಗಿ ಓದಿಕೊಳ್ಳದೆ ಮೊಬೈಲ್ ನೋಡಿದರೆ ಹೇಗೆ’ ಎಂದು ಪ್ರಶ್ನಿಸಿದ ಅವರು ‘ತಂದೆ-ತಾಯಿಯ ಕಷ್ಟವನ್ನು ಅರಿತು ಚೆನ್ನಾಗಿ ಅಭ್ಯಾಸ ಮಾಡಬೇಕು ಪದವಿಯಲ್ಲಿ ಉತ್ತಮ ಅಂಕ ಗಳಿಸಬೇಕು’ ಎಂದು ಸಲಹೆ ನೀಡಿದರು.
ತದನಂತರ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ತಾಲ್ಲೂಕಿನ ಮಲ್ಲದಗುಡ್ಡ ಗ್ರಾಮದ ಅಂಗನವಾಡಿ ಕೇಂದ್ರ, ಸರ್ಕಾರಿ ಮಹಾವಿದ್ಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು. ತದನಂತರ ಮಿನಿವಿಧಾನಸೌಧ ಕಚೇರಿ ಭೇಟಿ ನೀಡಿದಾಗ ನೆಲಹಾಸು ಬಂಡೆಗಳು ಕುಸಿದಿರುವುದನ್ನು ಕಂಡು ಇದರ ದುರಸ್ತಿಗಾಗಿ ಪ್ರಸ್ತಾವ ಸಲ್ಲಿಸಬೇಕು ಎಂದು ತಹಶೀಲ್ದಾರ್‌ಗೆ ಹೇಳಿದರು.
ನಗರಸಭೆಯ ಪ್ರಭಾರ ಪೌರಾಯುಕ್ತೆ ಶೃತಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ್, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಸದಸ್ಯರಾದ ಶಿವಶಂಕರಗೌಡ ಪೊಲೀಸ್‌ಪಾಟೀಲ, ಕೆ.ಶೇಷಗಿರಿರಾವ್, ಮೇಘರಾಜ್, ಶಿವಣ್ಣ, ಪ್ರಧಾನ ಅರ್ಚಕ ಗುರುದತ್ತ, ಅಮರೇಶ ಭಟ್, ನಿವೃತ್ತ ಎಇಇ ಶರಣಬಸಪ್ಪ ಪಟ್ಟೇದ್, ಕ್ಯಾಸೋಟೆಕ್ ಕಿರಿಯ ಎಂಜಿನಿಯರ್ ತಿಮ್ಮಣ್ಣ, ಕಾರ್ಯದರ್ಶಿ ಹನುಮೇಶ ಆಚಾರ್ ಇದ್ದರು.
ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲ ವಸತಿನಿಲಯಗಳ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಏರ್ಪಡಿಸುವ ಚಿಂತನೆಯಿದೆನಿತೀಶ್ ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.