ADVERTISEMENT

ಡಿಡಿಪಿಐ, ಬಿಇಒ ಅಮಾನತುಗೊಳಿಸಿ: ಮಾದಿಗ ದಂಡೋರ ಸಮಿತಿಯ ನರಸಿಂಹಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 10:17 IST
Last Updated 19 ನವೆಂಬರ್ 2021, 10:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೃಷಭೇಂದ್ರಯ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಅವರನ್ನು ಅಮಾನತು ಮಾಡದೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಲಾಗಿದ್ದು ಒಂದು ವಾರದಲ್ಲಿ ಆದೇಶ ನೀಡದಿದ್ದಲ್ಲಿ ಕಲಬುರಗಿಯ ಹೆಚ್ಚುವರಿ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಎನ್. ನರಸಿಂಹಲು ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ 30 ಜಿಲ್ಲೆಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ತಾಲ್ಲೂಕಿಗೆ ಒಬ್ಬರಂತೆ ತಾಲ್ಲೂಕು ನಿಯೋಜಕರನ್ನಾಗಿ ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ. ಇದು 2021ರ ಮಾರ್ಚ್‌ನಲ್ಲಿ ಅಂತ್ಯವಾಗಿದೆ. ಆದರೆ ವಿವಿಧ ಬೋಧಕೇತರ ಕಾರ್ಯಕ್ಕಾಗಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಬೋಧನೆಗೆ ಸಮಸ್ಯೆಯಾಗಿದೆ.

20016 ಡಿಸೆಂಬರ್ 19ರ ಕರ್ನಾಟಕ ಹೈಕೋರ್ಟ್‌ ಅದೇಶದ ಪ್ರಕಾರ ಶಿಕ್ಷಕರಿಗೆ ಹೆಚ್ಚುವರಿ ಕಾರ್ಯ ನಿಷೇಧಿಸಲಾಗಿದೆ. ಹೆಚ್ಚುವರಿ ಕೆಲಸಕ್ಕೆ ನಿಯೋಜನೆಗೊಂಡ ಶಿಕ್ಷಕರನ್ನು ಪುನಃ ಮಾತೃ ಇಲಾಖೆಗೆ ಕರ್ತವ್ಯದ ಮೇಲೆ ವರದಿ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರಿಗೆ 7 ದಿನಗಳ ಒಳಗೆ ವರದಿ ನೀಡಲು ತಿಳಿಸಿದೆ ಎಂದರು.

ADVERTISEMENT

ರಾಯಚೂರು ಜಿಲ್ಲೆಯ ಡಿಡಿಪಿಐ ಹಾಗೂ ಬಿಇಒ ಇವರು ಯಾವುದೇ ಶಿಕ್ಷಕರನ್ನು ಮರಳಿ ಮಾತೃ ಶಾಲೆಗೆ ಕಳುಹಿಸಿಲ್ಲ. ಈ ಬಗ್ಗೆ ಈಚೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಯಿಂದ ಧರಣಿ ನಡೆಸಲಾಗಿತ್ತು. ಇದಕ್ಕೆ ಸ್ಪಂದಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗೀಯ ಹೆಚ್ಚುವರಿ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೃಷಭೇಂದ್ರ ಹಾಗೂ ಬಿಇಒ ಚಂದ್ರಶೇಖರ ಅವರನ್ನು ಅಮಾನತುಗೊಳಿಸಲು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಆದರೂ ಕಲಬುರಗಿ ಹೆಚ್ಚುವರಿ ಆಯುಕ್ತ ನಲಿನ್ ಅತುಲ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲೆಗೆ ಆಗಮಿಸುತ್ತಿರುವ ನಲಿನ್ ಅತುಲ್ ಅವರಿಗೆ ಮನವಿ ಸಲ್ಲಿಸಲಾಗುವುದು. ಆನಂತರ ಒಂದು ವಾರದ ಗಡುವು ನೀಡಿ ಆನಂತರ ಕಲಬುರ್ಗಿ ಹೆಚ್ಚುವರಿ ಆಯುಕ್ತರ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಂಘದ ತಾಲ್ಲೂಕಾಧ್ಯಕ್ಷ ದುಳ್ಳಯ್ಯ, ಗುಂಜಹಳ್ಳಿ, ರಂಜಿತ್ ದಂಡೋರ, ಶಿವಕುಮಾರು ಬಿಟ್ಟು, ತಿಮ್ಮಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.