ADVERTISEMENT

ಹಟ್ಟಿಚಿನ್ನದಗಣಿ: ಆತಂಕ ಸೃಷ್ಟಿಸಿದ ಹಂದಿಗಳ ಸಾವು 

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 7:53 IST
Last Updated 19 ಆಗಸ್ಟ್ 2023, 7:53 IST
ಹಟ್ಟಿ ಪಟ್ಟಣ ಕ್ಯಾಂಪ್ ಪ್ರದೇಶದಲ್ಲಿ ಹಂದಿ ಸಾವನಪ್ಪಿರುವುದು
ಹಟ್ಟಿ ಪಟ್ಟಣ ಕ್ಯಾಂಪ್ ಪ್ರದೇಶದಲ್ಲಿ ಹಂದಿ ಸಾವನಪ್ಪಿರುವುದು   

ಹಟ್ಟಿಚಿನ್ನದಗಣಿ: ಪಟ್ಟಣದ ಎಲ್ಲೆಂದರಲ್ಲಿ ಹಂದಿಗಳ ಸರಣಿ ಸಾವು ಕಂಡುಬರುತ್ತಿವೆ. ಸಾಮಾನ್ಯವಾಗಿ ಓಡಾಡುತ್ತಿರುವ ಹಂದಿಗಳು ಏಕಾಏಕಿ ನೆಲಕ್ಕೆ ಬಿದ್ದು ಒದ್ದಾಡಿ ಕೆಲವೇ ಕ್ಷಣದಲ್ಲಿ ಉಸಿರು ನಿಲ್ಲಿಸುತ್ತಿವೆ. ದಿನಕ್ಕೆ ಕನಿಷ್ಠ ಐದಕ್ಕೂ ಹೆಚ್ಚು ಹಂದಿಗಳು ಮರಣ ಹೊಂದುತ್ತಿದ್ದು, ಇದರಿಂದ ಜನರಲ್ಲಿ ಆಂತಕ ಸೃಷ್ಟಿಯಾಗಿದೆ.

ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವ ಭೀತಿ ಉಂಟಾಗಿದ್ದು ಸತ್ತ ಹಂದಿಗಳನ್ನು ರಸ್ತೆ ಪಕ್ಕದಲ್ಲಿ ಬಿಸಾಕಿ ಹೋಗುತ್ತಿದ್ದು ರಸ್ತೆಯಲ್ಲಿ ನಡೆದಾಡಲು ಬರದಂತಹ ಸ್ಧಿತಿ ಇದೆ ಎನ್ನುತ್ತಾರೆ ಸಾರ್ವಜನಿಕರು. ವಾರ್ಡ್‌ ಸದಸ್ಯರು, ಸಂಘಟನೆಗಳು ವಿದ್ಯಾರ್ಥಿಗಳು ಮಹಿಳೆಯರು ರೈತರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರು ನೀಡಿದರು ಕ್ರಮ ಕಯಗೊಳ್ಳುತ್ತಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪಟ್ಟಣದಲ್ಲಿ ಸಾವನ್ನಪ್ಪಿದ ಹಂದಿಗಳ ಮಾಹಿತಿ ನೀಡಿದ ನಂತರ ಹಂದಿಗಳ ಮಾಲೀಕರು ತೆಗೆದುಕೊಂಡು ಹೋಗಲು ನಿರಾಕರಣೆ ಮಾಡುತ್ತಿದ್ದಾರೆ. ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿರುವ ಕಾರಣ ಈಚೆಗೆ ಅವರು ಕೂಡ ಬರುತ್ತಿಲ್ಲ. ಹಾಗಾಗಿ ನಿವಾಸಿಗಳಿಗೆ ಸಾವನ್ನಪ್ಪುತ್ತಿರುವ ಹಂದಿಗಳಿಂದ ತೊಂದರೆ ಎದುರಿಸುತ್ತಿದ್ದಾರೆ.

ADVERTISEMENT

ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು, ಸ್ವಚ್ಛತಾ ಸಿಬ್ಬಂದಿ ಕೆಲವೊಮ್ಮೆ ತೆಗೆದುಕೊಂಡು ಹೋಗುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಸಾವನಪ್ಪುತ್ತಿರುವ ಹಂದಿಗಳನ್ನು ಬೀದಿ ನಾಯಿಗಳು ಆಹಾರಕ್ಕಾಗಿ ತುಂಡರಸಿ ಎಲ್ಲೆಂದರಲ್ಲಿ ಬಿಸಾಡುತ್ತಿವೆ. ಹೀಗಾಗಿ ರೋಗ ಭೀತಿ ಹಾಗೂ ಸಾವಿನ ಪ್ರಮಾಣ ಸಾಕುಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡಿದರೆ ಹೇಗೆ ಎನ್ನುವ ಆತಂಕ ಎದುರಿಸುತ್ತಿದ್ದಾರೆ.

ಸಾವನಪ್ಪುವ ಹಂದಿಗಳನ್ನು ಎಳೆದುಕೊಂಡು ಹೋಗುವ ಹಂದಿಗಳ ಮಾಲೀಕರು ಬೈಪಾಸ್ ರಸ್ತೆಯ ಮಾರ್ಗದಲ್ಲಿ ಎಸೆದು ಬರುತ್ತಿದ್ದಾರೆ. ಹೀಗಾಗಿ ಕಾರ್ಮಿಕರು ವಿದ್ಯಾರ್ಥಿಗಳು ಮಹಿಳೆಯರು ಹಿರಿಯ ನಾಗರಿಕರು ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ.

ಹಂದಿಗಳ ಮಾಲೀಕರು ಸತ್ತ ಹಂದಿಗಳನ್ನು ಸುಡುತ್ತಿಲ್ಲ. ಎಷ್ಟು ಹಂದಿಗಳು ಸಾವನಪ್ಪಿವೆ ಎನ್ನುವ ಮಾಹಿತಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಇಲ್ಲಿನ ಜನರು.

ಹಟ್ಟಿ ಪಟ್ಟಣ ಕ್ಯಾಂಪ್ ಪ್ರದೇಶ, ಗಾಂಧಿ ಮೈದಾನ, ಬಸವಸೇವಾ ಸಮಿತಿ, ಗುಂಡುರಾವ್ ಕಾಲೊನಿ, ಜತ್ತಿ ಕಾಲೊನಿ, ರಾಮ್ ರಹೀಮ್ ಕಾಲೊನಿ, ವಾಲ್ಮೀಕಿ ನಗರ, ಕಾಕಾನಗರ, ಅಂಬೇಡ್ಕರ್ ನಗರದಲ್ಲಿ ಹಂದಿಗಳ ಸಾವಿನ ಸಂಖ್ಯೆ ಅಧಿಕವಾಗಿದೆ. ಆದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುತ್ತಾರೆ ನಿವಾಸಿಗಳು.

ಹಂದಿಗಳ ಮಿತಿಮಿರಿ ಸಾವನ್ನಪ್ಪುತ್ತಿರುವ ಕುರಿತು ದೂರುಗಳು ಬಂದಿವೆ. ಆದಷ್ಟು ಬೇಗನೆ ಕ್ರಮ ಜರುಗಿಸಲಾಗುವುದು.
-ಜಗನ್ನಾಥ, ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.