ರಾಯಚೂರು: ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರನ್ನು ಪಾಕಿಸ್ತಾನದಿಂದ ಬಂದಿರಬಹುದು ಎಂದು ಅವಮಾನಿಸಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಅವರ ಪರಿಷತ್ ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಇಲ್ಲಿಯ ನೂತನ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಎನ್. ರವಿಕುಮಾರ ಅವರು ಜಿಲ್ಲಾಧಿಕಾರಿ ಅವರು ಪಾಕಿಸ್ತಾನದಿಂದ ಬಂದಿದ್ದಾರೆ ಅಂತ ಕಾಣಿಸುತ್ತೆ ಎಂದು ಹೇಳಿರುವುದು ಸರಿಯಲ್ಲ. ಫೌಜಿಯಾ ತರನ್ನುಮ್ ಅವರ ಕೆಲಸವನ್ನು ಮೆಚ್ಚಿ ರಾಷ್ಟ್ರಪತಿ ಅವರು ಸನ್ಮಾನಿಸಿ ಗೌರವಿಸಿದ್ದಾರೆ. ಅಂತಹ ಪ್ರಾಮಾಣಿಕ ಅಧಿಕಾರಿಯ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಬದ್ದವಾಗಿ ನೇಮಕಗೊಂಡ ಅಧಿಕಾರಿಗೆ ಎನ್.ರವಿಕುಮಾರ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಪ್ರತಿಭಟನೆ ನಡೆಯುತ್ತಿರುವ ವಿಷಯಕ್ಕೂ ಜಿಲ್ಲಾಧಿಕಾರಿಗೂ ಯಾವುದೇ ಸಂಬಂದವಿಲ್ಲದಿದ್ದರೂ ಅನಗತ್ಯವಾಗಿ ಅವರನ್ನು ಎಳೆದು ತಂದಿದ್ದಾರೆ.. ಇಂತಹವರು ವಿಧಾನ ಪರಿಷತ್ ಸದಸ್ಯರಾಗಿ ಮುಂದುವರಿಯಲು ಯೋಗ್ಯರಲ್ಲ ಎಂದು ಟೀಕಿಸಿದರು.
ಎನ್.ರವಿಕುಮಾರ ಅವರು ಈ ರೀತಿ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡಿ ರಾಜಕೀಯ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಬಿಜೆಪಿ ನಾಯಕರು ದೇಶದಲ್ಲಿ ಇತ್ತೀಚೆಗೆ ಮುಸ್ಲಿಂ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಲವು ಹೇಳಿಕೆಗಳು ನೀಡುತ್ತಿದ್ದಾರೆ. ಇದು ಬೆಳವಣಿಗೆಯಲ್ಲ ಎಂದು ಹೇಳಿದರು.
ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ರಕ್ಷಣೆಗೆ ಬರಬೇಕು ಮನವಿ ಮಾಡಿದರು.
ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಸೈಯದ್ ಅಮೀನುಲ್ ಹಸನ್, ಮುಹಮ್ಮದ್ ಉಸ್ಮಾನ್, ಶೇಖ ಷಾವಲಿ, ಸೈಯದ್ ಟಿಪ್ಪು ಸುಲ್ತಾನ್, ಮುಹ್ಮದ್ ಮೊಹಿನುದ್ದೀನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.