ADVERTISEMENT

ಈಡಿಗ ಸಮಾಜವನ್ನು ಎಸ್‌.ಟಿಗೆ ಸೇರಿಸಿ: ಪ್ರಣವಾನಂದ ಸ್ವಾಮೀಜಿ

ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:32 IST
Last Updated 20 ನವೆಂಬರ್ 2025, 6:32 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಪ್ರಜಾವಾಣಿ ವಾರ್ತೆ

ರಾಯಚೂರು: ‘ಈಡಿಗ ಸಮಾಜವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 26ರಿಂದ ಚಿತ್ತಾಪುರದ ಕರದಾಳ ಗ್ರಾಮದಿಂದ ಬೆಂಗಳೂರಿವನರೆಗೂ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಎಲ್ಲಾ ಸಮಾಜಗಳಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು. ಈಡಿಗ ಸಮಾಜಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅನ್ಯಾಯ ಮಾಡಿವೆ. ಸಚಿವ ಸ್ಥಾನ ಸೇರಿದಂತೆ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ತಾರತಮ್ಯ ಮಾಡಿವೆ’ ಎಂದು ಆರೋಪಿಸಿದರು.

ADVERTISEMENT

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಸಮೀಪಿಸಿದರೂ ಈಡಿಗ ಸಮಾಜಕ್ಕೆ ನ್ಯಾಯ ಒದಗಿಸಿಲ್ಲ. ನಿಗಮಕ್ಕೆ ₹10 ಕೋಟಿ ಹೊರತುಪಡಿಸಿ ಬೇರೆ ಅನುದಾನ ನೀಡಿಲ್ಲ. ಸಚಿವ ಸಂಪುಟ ಪುನರ್ ರಚನೆಯಲ್ಲಿ ಬಿ.ಕೆ.ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದರು.

‘ಸೇಂದಿ, ಸಾರಾಯಿ ಮಾರಾಟ ನಿಷೇಧ ಮಾಡಿರುವುದರಿಂದ ಸಿ.ಎಚ್‌.ಪೌಡರ್ ಹಾವಳಿ ಹೆಚ್ಚಿದೆ. ತೆಲಂಗಾಣ, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಂದಿಗೂ ಸೇಂದಿ ಮಾರಾಟ ಮಾಡಲಾಗುತ್ತಿದೆ. ಮದ್ಯ ಮಾರಾಟ ಪರವಾನಗಿಯಲ್ಲಿ ಈಡಿಗ ಸಮಾಜಕ್ಕೆ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಪಾದಯಾತ್ರೆಯಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಜಿ.ಶ್ರೀನಾಥ ಮಾತನಾಡಿದರು.

ಮುಖಂಡರಾದ ಭೀಮನಗೌಡ, ಅಶೋಕ ಸಿರವಾರ, ಮಹೇಶ ಗೌಡ, ಸತ್ಯನಾರಾಯಣ ಗೌಡ ಹಾಗೂ ಸುರೇಶಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.