ADVERTISEMENT

9 (ಎ) ಕಾಲುವೆ ಕಾಮಗಾರಿ ಆರಂಭಿಸಿ: ರೈತರ ಮನವಿ

ನಾರಾಯಣಪುರ ಬಲದಂಡೆ 9 (ಎ) ಕಾಲುವೆ ಭಾಗದ ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 11:20 IST
Last Updated 12 ಜನವರಿ 2022, 11:20 IST
ಕವಿತಾಳ ಸುತ್ತಮುತ್ತಲಿನ ಗ್ರಾಮದ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಈಚೆಗೆ ರಾಯಚೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು
ಕವಿತಾಳ ಸುತ್ತಮುತ್ತಲಿನ ಗ್ರಾಮದ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಈಚೆಗೆ ರಾಯಚೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು   

ಕವಿತಾಳ: ನಾರಾಯಣಪುರ ಬಲದಂಡೆ 9 (ಎ) ಕಾಲುವೆಯ ವಡವಟ್ಟಿ ಶಾಖಾ ಕಾಲುವೆ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಯೋಜನೆ ವ್ಯಾಪ್ತಿಯ ರೈತರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಅವರಿಗೆ ಈಚೆಗೆ ರಾಯಚೂರಿನಲ್ಲಿ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ಪತ್ರಿಕೆ ಮಾಹಿತಿ ನೀಡಿದ ರೈತರು, ‘ಕಾಮಗಾರಿಯನ್ನು ಗುತ್ತಿಗೆ ಪಡೆದ ಇಬ್ಬರು ಗುತ್ತಿಗೆದಾರರಿಗೆ 2017 ಅಕ್ಟೋಬರ್ 8 ರ ಒಳಗಾಗಿ ಟೆಂಡರ್ ಒಪ್ಪಂದ ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರೂ ಗುತ್ತಿಗೆದಾರರು ಒಪ್ಪಂದ ಮಾಡಿಕೊಂಡಿಲ್ಲ ಎಂದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ವಿಳಂಬವಾಗಿ ಕವಿತಾಳ, ಕಲಂಗೇರಾ, ಚಿಕ್ಕಬಾದರದಿನ್ನಿ, ಹಿರೇಹಣಿಗಿ, ಪಾತಾಪುರ, ಮಲ್ಲಟ, ಯು.ಗುಡಡದಿನ್ನಿ ಸೇರಿದಂತೆ 8 ಹಳ್ಳಿಗಳ ವ್ಯಾಪ್ತಿಯ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಶೀಘ್ರ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ’ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ರೈತ ಮುಖಂಡರಾದ ಶಿವರುದ್ರಗೌಡ ಕಲಂಗೇರಿ, ಶಂಕರಗೌಡ ಗುಡದಿನ್ನಿ, ತಿಮ್ಮನಗೌಡ ಹಣಿಗಿ, ಶರಣಬಸವ ಹಣಿಗಿ, ಶರಣುಭೂಪಾಲ ಭಾವಿಕಟ್ಟಿ, ದುರುಗಪ್ಪ ಕಲಂಗೇರಿ, ವಿರೇಶ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.