ADVERTISEMENT

ಹಟ್ಟಿ ಚಿನ್ನದಗಣಿ: ಬಿಸಿಯೂಟದಲ್ಲಿ ಹುಳ ಪತ್ತೆ, ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 11:23 IST
Last Updated 12 ಜನವರಿ 2022, 11:23 IST
ಹಟ್ಟಿ ಚಿನ್ನದ ಗಣಿ ಸಮೀಪದ ಮಾಚನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡಿದ ಬಿಸಿಯೂಟದಲ್ಲಿ ಹುಳುಗಳು ಇರುವುದು 
ಹಟ್ಟಿ ಚಿನ್ನದ ಗಣಿ ಸಮೀಪದ ಮಾಚನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೀಡಿದ ಬಿಸಿಯೂಟದಲ್ಲಿ ಹುಳುಗಳು ಇರುವುದು    

ಹಟ್ಟಿ ಚಿನ್ನದಗಣಿ: ಮಾಚನೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ ಬಿಸಿಯೂಟದಲ್ಲಿ ಹುಳಮಿಶ್ರಿತ ಅನ್ನ ಸಾಂಬಾರು ನೀಡಿದ್ದು, ಊಟ ಮಾಡದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಮಾಚನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 450 ಅಧಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ಅಡುಗೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಹುಳಮಿಶ್ರಿತ ಬಿಸಿಯೂಟ ನೀಡಲಾಗುತ್ತಿದ್ದು, ಸಂಬಂಧಿಸಿದ ಸಿಬ್ಬಂದಿಯನ್ನು ವಜಾ ಮಾಡಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.

‘ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರು ಗುಣಮಟ್ಟದ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಾರೆ. ಆದರೆ ನಮಗೆ ಹುಳಮಿಶ್ರಿತ ಬಿಸಿಯೂಟ ನೀಡುತ್ತಾರೆ. ಸಾಂಬಾರಿನಲ್ಲಿ, ಕಾಯಿಪಲ್ಯೆ ಹಾಗೂ ಮಸಾಲೆ ಪದಾರ್ಥಗಳು ಇರುವುದಿಲ್ಲ. ಶಿಕ್ಷಕರು ಅಡುಗೆ ಸಿಬ್ಬಂದಿ ಊಟ ಮಾಡುವ ಅನ್ನ ಹಾಗೂ ಸಾಂಬಾರಿನಲ್ಲಿ ಎಲ್ಲವೂ ಇರುತ್ತದೆ. ಮಕ್ಕಳ ಊಟದಲ್ಲಿಯೂ ಮಲತಾಯಿ ಧೋರಣೆ ಮಾಡಲಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದರು.

ADVERTISEMENT

ಹಾಳಾಗಿರುವ ಅಕ್ಕಿಯಿಂದಲೇ ಮಕ್ಕಳಿಗೆ ಊಟ ತಯಾರಿಸಿ ಕೊಡಲಾಗುತ್ತಿದೆ. ಸಾಂಬಾರು ಸರಿ ಇರುವುದಿಲ್ಲ. ಈ ಬಗ್ಗೆ ಶಾಲೆಯ ಮುಖ್ಯಸ್ಥರಿಗೆ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇಂತವರ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಊಟ ಸರಿಯಿಲ್ಲ ಎಂದು ಶಿಕ್ಷಕರಿಗೆ ಹೇಳಿದರೆ, ಅದನ್ನೇ ತಿನ್ನಿ ಎಂದು ವಿದ್ಯಾರ್ಥಿಗಳಿಗೆ ಅವರು ಗದರಿಸುತ್ತಾರೆ ಎಂದು ನೊಂದ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಮಾಚನೂರು ಸರ್ಕಾರಿ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಅಡುಗೆ ಸಿಬ್ಬಂದಿಯ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು‘ ಎಂದು ತಾಲ್ಲೂಕು ಬಿಸಿಯೂಟ ಯೋಜನಾಧಿಕಾರಿ ಚಂದ್ರಶೇಖರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.