ದೇವದುರ್ಗ: ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕು ಕೇಂದ್ರದಲ್ಲಿ ಜನರು ಇಲ್ಲಗಳ ನಡುವೆಯೇ ಬದುಕುತ್ತಿದ್ದಾರೆ.
ಮೂಲ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕಿನ ಜನರು ಉತ್ತಮ ರಸ್ತೆ ಇಲ್ಲದೆ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ.
ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದು, ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದ್ದಾರೆ.
ತಾಲ್ಲೂಕಿನ ದೇವದುರ್ಗ ಪಟ್ಟಣದಿಂದ ಕೋಣಚಪ್ಪಳ್ಳಿ, ನಗರಗುಂಡ, ಬೆಣಕಲ್, ಪರತಪುರ, ಕರ್ಕಿಹಳ್ಳಿ, ಮೇದರಗೋಳವರೆಗಿನ 18 ಕಿ.ಮೀ ವರೆಗಿನ ರಸ್ತೆಯುದ್ದಕ್ಕೂ ತಗ್ಗು–ಗುಂಡಿಗಳು ಬಿದ್ದು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.
ನಗರಗುಂಡ ಮತ್ತು ಬೆಣಕಲ್ ಹತ್ತಿರ ರಸ್ತೆ ಮೇಲೆ ಬಿದ್ದಿರುವ ಗುಂಡಿಯನ್ನು 2-3 ಟ್ರ್ಯಾಕ್ಟರ್ ಮರಂ ಹಾಕಿದರೂ ಮುಚ್ಚಲು ಆಗುತ್ತಿಲ್ಲ. ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಮೇಲೆ ನೀರು ನಿಂತಿದ್ದು, ಕಾರು ಮತ್ತು ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ರಸ್ತೆ ಮಾರ್ಗದಲ್ಲಿ ಕೃಷ್ಣಾ ನದಿ ತೀರದ ಗ್ರಾಮಗಳು ಬರುವುದರಿಂದ ಅತಿ ಹೆಚ್ಚು ಮರಳು ಅಕ್ರಮ ಸಾಗಣೆ ಮಾಡುವ ಟಿಪ್ಪರ್‌ಗಳು ಹಗಲಿರುಳು ಸಂಚರಿಸುತ್ತವೆ. ದೊಂಡಂಬಳಿ ಗ್ರಾಮದ ರಸ್ತೆಯಲ್ಲಂತೂ ಮೊಣಕಾಲಿನವರೆಗೂ ಗುಂಡಿಗಳು ಬಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಯಾಗಲಿ ದುರಸ್ತಿಯ ಗೋಜಿಗೆ ಹೋಗುತ್ತಿಲ್ಲ.
ಅಲ್ಲಲ್ಲಿ ಉಳಿದ ಡಾಂಬರು ರಸ್ತೆಗಳು ಮಳೆ ಹಾಗೂ ಟಿಪ್ಪರ್ ಸಂಚಾರದಿಂದ ಕಿತ್ತು ಹೋಗಿವೆ. ಪ್ರಸ್ತುತ ಮಳೆಗಾಲ ಇರುವುದರಿಂದ ಮಳೆ ನೀರು ರಸ್ತೆ ಗುಂಡಿಗಳಲ್ಲಿ ಸಂಗ್ರಹವಾಗಿ ಅದನ್ನು ಇಮ್ಮಡಿಗೊಳಿಸುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂಥ ರಸ್ತೆಯಲ್ಲಿಯೇ ನಿತ್ಯ ಸಂಚರಿಸಿದರೂ ಜಾಣಕುರುಡು ಪ್ರದರ್ಶನ ಮಾಡುತ್ತಿರುವುದು ಅವರ ಬೇಜವಾಬ್ದಾರಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ರಸ್ತೆ ಅಭಿವೃದ್ಧಿ ಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ. ಶೀಘ್ರದಲ್ಲಿಯೇ ದುರಸ್ತಿ ಮಾಡಿದರೆ ಅನುಕೂಲವಾಗಲಿದೆ ಎಂದು ಕೋಣಚಪ್ಪಳ್ಳಿ ಗ್ರಾಮಸ್ಥ ಸಂಗನಗೌಡ ಆಗ್ರಹಿಸಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ಊರಿಗೆ ಬರುವ ಜನಪ್ರತಿನಿಧಿಗಳು ನಂತರ ಈ ಕಡೆ ತಲೆ ಹಾಕುವುದೇ ಇಲ್ಲ. ರಸ್ತೆ ಪೂರ್ಣ ಹಾಳಾಗಿದ್ದರೂ ದುರಸ್ತಿ ಮಾಡಿಸುವವರಿಲ್ಲಸಂಗನಗೌಡ ಆಣೆರ, ಕೋಣಚಪ್ಪಳಿ ಗ್ರಾಮಸ್ಥ
ನಗರಗುಂಡ–ಕೋಣಚಪ್ಪಳ್ಳಿ ರಸ್ತೆ ಅಭಿವೃದ್ಧಿಗೆ ₹6 ಕೋಟಿ ಅನುದಾನ ಮಂಜೂರಾಗಿದೆ. ಸೆ. 22ರಂದು ಅಡಿಗಲ್ಲು ನೆರವರಿಸಿ ಶೀಘ್ರವೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆಕರೆಮ್ಮ ಜಿ.ನಾಯಕ, ಶಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.