ADVERTISEMENT

ದೇವದಾಸಿ ಪದ್ಧತಿಗೆ ಬಲಿಯಾದವರು ಅನಿಷ್ಟದಿಂದ ಮುಖ್ಯವಾಹಿನಿಗೆ ಬರಲಿ

ಮಾಜಿ ದೇವದಾಸಿಯರ ಮಕ್ಕಳ 20 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಿತ್ಯಾನಂದಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 14:28 IST
Last Updated 27 ಜೂನ್ 2019, 14:28 IST
ರಾಯಚೂರಿನಲ್ಲಿ ಗುರುವಾರ ಮಾಜಿ ದೇವದಾಸಿಯರ ಮಕ್ಕಳ ಸಾಮೂಹಿಕ ವಿವಾಹವು ಸರಳವಾಗಿ ನೆರವೇರಿತು
ರಾಯಚೂರಿನಲ್ಲಿ ಗುರುವಾರ ಮಾಜಿ ದೇವದಾಸಿಯರ ಮಕ್ಕಳ ಸಾಮೂಹಿಕ ವಿವಾಹವು ಸರಳವಾಗಿ ನೆರವೇರಿತು   

ರಾಯಚೂರು: ಸಮಾಜದಲ್ಲಿ ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿಗೆ ಬಲಿಯಾದವರು ಸಮಾಜದ ಕಟ್ಟಕಡೆಯ ಜೀವನ ನಡೆಸುತ್ತಿದ್ದು, ಅವರೆಲ್ಲಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಸಾಮೂಹಿಕ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ ಹೇಳಿದರು.

ನಗರದ ವಿಠ್ಠಲ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರದ 2ನೇ ದಿನ ಗುರುವಾರದಂದು ಮಾಜಿ ದೇವದಾಸಿ ಮಹಿಳೆಯರ ಮಕ್ಕಳ 20 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು. ವಿವಾಹ ಮಾಡಿಕೊಂಡಿರುವ ದಂಪತಿ ತಂದೆ–ತಾಯಿ ಮುಪ್ಪಿನ ಕಾಲದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ADVERTISEMENT

ದೇವದಾಸಿ ಮಹಿಳಾ ಸಂಘಟನೆ ರಾಜ್ಯ ಗೌರವ ಅಧ್ಯಕ್ಷ ಯು.ಬಸವರಾಜ ಮಾತನಾಡಿ, ಸಂಘಟನೆಯ ಹೋರಾಟದ ಫಲದಿಂದ ದೇವದಾಸಿಯ ಮಕ್ಕಳನ್ನು ಮದುವೆ ಮಾಡಿಕೊಂಡವರಿಗೆ ಸರ್ಕಾರ ಪ್ರೋತ್ಸಾಹಧನ ಘೋಷಣೆ ಮಾಡಿದೆ. ಈ ಸೌಲಭ್ಯ ಪಡೆಯಲು ಸರಳ ವಿವಾಹ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷಕರವಾಗಿದೆ ಎಂದು ತಿಳಿಸಿದರು.

ದೇವದಾಸಿಯ ಪುತ್ರಿಯನ್ನು ಮದುವೆ ಮಾಡಿಕೊಂಡರೆ ₹5 ಲಕ್ಷ ಹಾಗೂ ಪುತ್ರನನ್ನು ಮದುವೆಯಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸಂಘದ ಹೋರಾಟದ ಫಲದಿಂದ ಅನಿಷ್ಟ ಪದ್ಧತಿಗೆ ಮಹಿಳೆಯರು ಬಲಿಯಾಗುವುದು ತಡೆಯಲಾಗಿದೆ ಎಂದರು.

ಸಾಮೂಹಿಕ ವಿವಾಹದ ಮೂಲಕ ಆರ್ಥಿಕ ಹೊರೆಯಿಂದ ಪಾರಾಗಿ, ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಕೂಡ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ವಿಮೆ ನೌಕರರ ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ.ಶರಣಗೌಡ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ ಮಾತನಾಡಿದರು.

20 ಜೋಡಿ ವಿವಾಹ:ಮಂಜುನಾಥ-ಲಕ್ಷ್ಮೀ, ಸುನೀಲ್ –ಗೌತಮಿ, ಭೀಮರೆಡ್ಡಿ-ಅಂಬಮ್ಮ, ಜಯಶ್ರೀ-ಉದಯಕುಮಾರ, ಗಂಗಮ್ಮ– ಮೌಲಪ್ಪ, ಅಮರಪ್ಪ- ಭಾಗ್ಯಶ್ರೀ, ಸುರೇಶ- ಅಶ್ವಿನಿ, ಬಸಲಿಂಗಮ್ಮ- ಶಿವರಾಜ, ಅನ್ನಪೂರ್ಣ- ಶಶಿಕುಮಾರ, ಕವಿತಾ- ಮಹಾಂತೇಶ, ಹುಸೇನಪ್ಪ- ರೂಪಾ, ಅಶೋಕ-ಶಂಕ್ರಮ್ಮ, ಲಕ್ಷ್ಮೀ- ಮೌನೇಶ ಸೇರಿದಂತೆ ಏಳು ಯುವತಿಯರು ಹಾಗೂ 13 ಯುವಕರು ಒಟ್ಟು 20 ಜೋಡಿ ಸಾಮೂಹಿಕ ವಿವಾಹ ನೆರವೇರಿತು.

ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಎಚ್.ಪದ್ಮಾ ಅಧ್ಯಕ್ಷತೆ ವಹಿಸಿದ್ದರು. ದೇವದಾಸಿಯರ ಪುನರ್ ವಸತಿ ಯೋಜನಾಧಿಕಾರಿ ಗೋಪಾಲ ನಾಯಕ ಇದ್ದರು. ಡಿ.ಎಸ್.ಶರಣಬಸವ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.