ADVERTISEMENT

ದೇವದುರ್ಗ: ಬಜೆಟ್‌ನಲ್ಲಿ ಸಿಗುತ್ತಾ ನೀರಾವರಿಗೆ ಆದ್ಯತೆ

ಆಯವ್ಯಯದತ್ತ ಅರಕೇರಾ, ದೇವದುರ್ಗ ತಾಲ್ಲೂಕುಗಳ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 9:10 IST
Last Updated 28 ಫೆಬ್ರುವರಿ 2026, 9:10 IST
ಕರೆಮ್ಮ ನಾಯಕ
ಕರೆಮ್ಮ ನಾಯಕ   

ದೇವದುರ್ಗ: ನೀರಾವರಿಗಾಗಿ ಮನವಿ ಸಲ್ಲಿಸಿರುವ ಅರಕೇರಾ ಮತ್ತು ದೇವದುರ್ಗ ಅವಳಿ ತಾಲ್ಲೂಕಿನ ರೈತರ ರಾಜ್ಯ ಬಜೆಟ್‌ನತ್ತ ನಿರೀಕ್ಷೆಯ ನೋಟ ನೆಟ್ಟಿದ್ದಾರೆ. 

‌ನಾರಾಯಣಪುರ ಬಲದಂಡೆ ಕಾಲುವೆಯ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವ ಉದ್ದೇಶದಿಂದ 2022 ರಲ್ಲಿ 1,400 ಕೋಟಿ ವೆಚ್ಚದಲ್ಲಿ ಆರಂಭವಾದ ಕಾಲುವೆಗಳ ನವೀಕರಣ ಕಾಮಗಾರಿ ಗುತ್ತಿಗೆ ಪಡೆದ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಒಡೆತನದ ಎನ್‌ಡಿಡಬ್ಲ್ಯೂ ಕಂಪನಿ ತಾಲ್ಲೂಕಿನ ಕಾಲುಗಳ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದರಿಂದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ.

ಟೆಂಡರ್ ಪಡೆಯದೇ ಕಾಮಗಾರಿ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಸರ್ಕಾರ ಸದನ ಸಮಿತಿ ಮೂಲಕ ತನಿಖೆ ನಡೆಸಿ ಎನ್‌ಡಿಡಬ್ಲ್ಯೂ ಕಂಪನಿಗೆ ₹500 ಕೋಟಿ ದಂಡ ವಿಧಿಸಿತ್ತು. ದಂಡ ಪಾವತಿಸಿದ ಕಂಪನಿಯ ಮಾಲೀಕ ಕಾಮಗಾರಿಗಳನ್ನು ಪೂರ್ಣಗೊಳಿಸದೇ ರೈತರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ರೈತ ಸಂಘಗಳು ಹೋರಾಟ ನಡೆಸಿದರು ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ. ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ.

ADVERTISEMENT

ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್‌ ಈ ಕುರಿತು ಮಾಹಿತಿ ಪಡೆದಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವ ಬಗ್ಗೆಯಾಗಲಿ ಅಥವಾ ಹೆಚ್ಚುವರಿ ಅನುದಾನ ಒದಗಿಸುವ ಕ್ರಮ ಕೈಗೊಂಡಿಲ್ಲ. ದಂಡ ಪಾವತಿಸಿದ ಕಂಪನಿ ಉಪಗುತ್ತಿಗೆ ಪಡೆದ ಗುತ್ತಿಗೆದಾರರಿಗೂ ಬಿಲ್ ಪಾವತಿಸದೇ ಹಿನ್ನೆಲೆ ಗುತ್ತಿಗೆದಾರರ ಸಂಘದಿಂದ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆದಿತ್ತು.

ಸರ್ಕಾರ ಎನ್‌ಡಿಡಬ್ಲ್ಯೂ ಕಂಪನಿಗೆ ನೀಡಿದ ಟೆಂಡರ್ ರದ್ದು, ಹೆಚ್ಚುವರಿ ಅನುದಾನ ಒದಗಿಸಿ ಮರು ಟೆಂಡರ್ ಪ್ರಕ್ರಿಯೆ ಮಾಡಿ ರೈತರ ನಾರಾಯಣಪುರ ಬಲದಂಡೆ ಕಾಲುವೆಯ ಎಲ್ಲಾ ಉಪ ಕಾಲುವೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ರೈತರು ಮತ್ತು ರೈತಪರ ಸಂಘಟನೆ ಮುಂಖಡರು ಸರ್ಕಾರದ ಗಮನಸೆಳೆದಿದ್ದಾರೆ. ಹೀಗಾಗಿ ಬಜೆಟ್‌ನತ್ತ ರೈತರ ಚಿತ್ತ ನೆಟ್ಟಿದೆ. 

ಕೊನೆಯ ಭಾಗದ ಜಮೀನುಗಳಿಗೆ ನೀರು ಒದಗಿಸಲು ಸರ್ಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ತಾಲ್ಲೂಕಿನ ರೈತರ ಪರ ಸಂಘಟನೆಗಳ ಒತ್ತಾಯ ಮತ್ತು ರೈತರ ಆಗ್ರಹವಾಗಿದೆ.

ಅರಕೇರಾ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ನೀರಾವರಿ ವಂಚಿತ ಪ್ರದೇಶಗಳಾದ ವಂದಲಿ, ಪಲಕನಮರಡಿ, ಮದರಕಲ್, ಭೂಮನಗುಂಡ ಮತ್ತು ಮಲ್ಲಾಪೂರ ಗ್ರಾಮಗ ವ್ಯಾಪ್ತಿಯಲ್ಲಿನ ಸುಮಾರು 8 ಸಾವಿರಕ್ಕೂ ಹೆಚ್ಚು ಹೇಕ್ಟೆರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ ಸೌಲಭ್ಯ ಕಲ್ಪಿಸಲು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದು ಈಡೇರುತ್ತಿಲ್ಲ.  

ಶ್ರೀಮುಂಡರಗಿ ಶಿವಣ್ಣ ತಾತ ಏತ ನೀರಾವರಿ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟು ಯೋಜನೆ ಅನುಷ್ಠಾನ ಮಾಡಲು ಶಾಸಕಿ ಬೇಡಿಕೆ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದಿಸಿದ ಸಿಎಂ ಈಡೇರಿಸುವ ಭರವಸೆ ನೀಡಿದ್ದಾರೆ.

‘ದೇವದುರ್ಗ ಪಟ್ಟಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಿಸುವ ಬೇಡಿಕೆ ಇದೆ. ಕೃಷ್ಣಾ ನದಿಯಿಂದ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಮಳೆ ಕೊರತೆಯಾಗುವ  ಪ್ರದೇಶಗಳ ಕುಡಿಯುವ ನೀರಿನ ಪೂರೈಕೆಗಾಗಿ ಲಿಫ್ಟ್ ಮಾಡುವ ಮೂಲಕ ಎರಡು ತಾಲ್ಲೂಕಿನ 28 ಕೆರೆಗಳಿಗೆ ನೀರು ತುಂಬಿಸುವ 2ನೇ ಹಂತದ ಯೋಜನೆಗೆ ಅನುದಾನ ಒದಗಿಸುವ ಬೇಡಿಕೆ ಇದೆ’ ಎಂದು ಶಾಸಕಿ ಕರೆಮ್ಮ  ನಾಯಕ ಪ್ರಜಾವಾಣಿ ತಿಳಿಸಿದರು.

ಪ್ರಭಾಕರ ಪಾಟೀಲ
ವಗಂಡಬಳಿ ಹತ್ತಿರ ನಾರಾಯಣಪುರ ಬಲದಂಡೆ ಕಾಲುವೆಯ ಉಪ ಕಾಲುವೆ ನವೀಕರಣ ಕಾಮಗಾರಿ ನನೆಗುದಿಗೆ ಬಿದ್ದಿರುವುದು
ನೀರಿಲ್ಲದೆ ಒಣಗಿರುವ ನಾರಾಯಣ ನಾಯಕ ತಾಂಡಾ ಕೆರೆ 
ಶರಣಗೌಡ ಸುಂಕೇಶ್ವರಹಾಳ
ಒಳಚರಂಡಿ ಏತ ನೀರಾವರಿ ಮತ್ತು 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸವಂತೆ ಬೇಡಿಕೆ ಸಲ್ಲಿಸಿದ್ದೇನೆ ಸರ್ಕಾರ ಸ್ಪಂದಿಸುವ ಭರವಸೆ ಇದೆ 
ಕರೆಮ್ಮ ನಾಯಕ ಶಾಸಕಿ 
ಸರ್ಕಾರ ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ಒದಗಿಸಿದ ಅನುದಾನ ಮಾದರಿಯಲ್ಲಿ ಪ್ರತಿಪಕ್ಷದ ಶಾಸಕರು ಇರುವ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಬೇಕು 
ಶರಣಗೌಡ ಸುಂಕೇಶ್ವರಹಾಳ ತಾಲ್ಲೂಕು ಅಧ್ಯಕ್ಷ ಹಿಂದುಳಿದ ವರ್ಗಗಳ ಒಕ್ಕೂಟ
ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿದ ಅನುದಾನದ ಮಾದರಿಯಲ್ಲಿ ಕೃಷಿಗೆ ಮೀಸಲಿಡಬೇಕು 
ಪ್ರಭಾಕರ ಪಾಟೀಲ ರೈತ ಸಂಘದ ಜಿಲ್ಲಾಧ್ಯಕ್ಷ 

ಅರಕೇರಾ ತಾಲ್ಲೂಕಿಗೆ ಸಿಗುತ್ತಾ ಅನುದಾನ?

ದೇವದುರ್ಗ ತಾಲ್ಲೂಕಿನಿಂದ ಬೇರ್ಪಟ್ಟು ನೂತನ ತಾಲ್ಲೂಕು ಕೇಂದ್ರವಾದ ಅರಕೇರಾದಲ್ಲಿ ವಿವಿಧ ಇಲಾಖೆ ಕಚೇರಿ ಸ್ಥಾಪಿಸಿ ಸರ್ಕಾರ ಅನುದಾನ ಒದಗಿಸಿ ಜನರಿಗೆ ಅನುಕೂಲ ಮಾಡಬೇಕಿದೆ. ತಾಲ್ಲೂಕು ಕೇಂದ್ರವಾಗಿ 3 ವರ್ಷದ ನಂತರ ಕಂದಾಯ ಮತ್ತು ತಾಲ್ಲೂಕು ಪಂಚಾಯಿತಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಜನರು ಅಗತ್ಯ ಸೇವೆ ಪಡೆಯಲು 2 ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಾಗಿದ್ದು ಅನಿವಾರ್ಯವಾಗಿದೆ. ಬಸ್ ವ್ಯವಸ್ಥೆ ಇಲ್ಲದ ಗ್ರಾಮಗಳನ್ನು ಹೋಬಳಿ ಕೇಂದ್ರ ಮಾಡಿದ್ದು ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಜನರಿಗೆ ಆಡಳಿತಾತ್ಮಕ ಸೇವೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ರಚನೆಯಾದ ತಾಲ್ಲೂಕಿಗೆ ಸರ್ಕಾರ ಕನಿಷ್ಠ ಸೌಕರ್ಯ ಒದಗಿಸಬೇಕು.

ನೂತನ ತಾಲ್ಲೂಕು ಕೇಂದ್ರ ಅರಕೇರಾದಲ್ಲಿ ಸರ್ಕಾರ ಪ್ರಜಾಸೌಧ ಮತ್ತು ಬಸ್ ಘಟಕ ಹಾಗೂ ಶಿಕ್ಷಣ ಇಲಾಖೆಯ ಕಚೇರಿ ಸ್ಥಾಪನೆಗೆ ಹಣ ಒದಗಿಸುವ ನಿರೀಕ್ಷೆ ಇದೆ. ಆದರೆ 10 ವರ್ಷದ ಹಿಂದೆ ರಚನೆಯಾದ ತಾಲ್ಲೂಕು ಕೇಂದ್ರಗಳಿಗೆ ಇಂದಿಗೂ ಸರ್ಕಾರ ಸಮರ್ಪಕ ಕಚೇರಿ ಸ್ಥಾಪನೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಮುಂದಾಗದೆ ಇರುವುದು ಮತ್ತೆ ನಿರಾಶೆಯಾಗುವ ಲಕ್ಷಣವೂ ಜನರಲ್ಲಿ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.