
ಲಿಂಗಸುಗೂರು: ‘ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಸೇವನೆಯಿಂದ ಮಧುಮೇಹ ನಿಯಂತ್ರಣ ಸಾಧ್ಯ’ ಎಂದು ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ವಿಜಯಕುಮಾರ ಹೇಳಿದರು.
ಪಟ್ಟಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವ ಮಧಮೇಹ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚಟುವಟಿಕೆ ರಹಿತ ಜೀವನಶೈಲಿ, ಹೆಚ್ಚಿನ ಕೊಬ್ಬಿನ ಅಂಶ ಹೊಂದಿರುವುದು, ಅತಿಯಾದ ಧೂಮಪಾನ, ಮದ್ಯಪಾನ, ಅನುವಂಶೀಯತೆ, ಅನಾರೋಗ್ಯಕರ ಆಹಾರ ಸೇವನೆ, ಅತಿಯಾದ ಉಪ್ಪು ಬಳಕೆ ಮತ್ತು ಎಣ್ಣೆಯಿಂದ ಮಾಡಿದ ಖಾದ್ಯಗಳ ಸೇವನೆ ಮಧುಮೇಹಕ್ಕೆ ಕಾರಣಗಳಾಗಿವೆ’ ಎಂದು ಹೇಳಿದರು.
‘ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ ಮಾತನಾಡಿ, ‘ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಧುಮೇಹ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ, ಐಎಂಎ ಕಾರ್ಯದರ್ಶಿ ಶರಣಬಸವರಾಜ ಸಜ್ಜನ, ಹಿರಿಯ ವೈದ್ಯರಾದ ಗುರುರಾಜ ದೇಶಪಾಂಡೆ, ಡಾ.ಶರಣಗೌಡ ಪಾಟೀಲ, ಡಾ.ಅಮರೇಗೌಡ ಪಾಟೀಲ, ಡಾ.ರಾಚಪ್ಪ ಬುದ್ದಿನ್ನಿ, ಡಾ. ಡಿ.ಎಚ್. ಕಡದಹಳ್ಳಿ, ಡಾ.ಬಸವರಾಜ, ಡಾ.ಪೂಲಭಾವಿ, ಡಾ.ರುದ್ರಮುನಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ, ರವಿಕುಮಾರ ಹೂಗಾರ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.