ADVERTISEMENT

ಸಿಂಧನೂರು | ಮುಕ್ಕುಂದಾದಲ್ಲಿ ಐದು ಶಾಸನಗಳ ಶೋಧ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 13:57 IST
Last Updated 22 ಸೆಪ್ಟೆಂಬರ್ 2024, 13:57 IST
<div class="paragraphs"><p>ಶಾಸನ (ಪ್ರಾತಿನಿಧಿಕ ಚಿತ್ರ)</p></div>

ಶಾಸನ (ಪ್ರಾತಿನಿಧಿಕ ಚಿತ್ರ)

   

ಸಿಂಧನೂರು: ತಾಲ್ಲೂಕು ಕೇಂದ್ರದಿಂದ 32 ಕಿ.ಮೀ ದೂರದಲ್ಲಿರುವ ಮುಕ್ಕುಂದಾ ಗ್ರಾಮದಲ್ಲಿ ಐದು ಶಾಸನಗಳನ್ನು ಸಂಶೋಧಕ ಚನ್ನಬಸಪ್ಪ ಮಲ್ಕಂದಿನ್ನಿ ಅವರು ಪತ್ತೆ ಹಚ್ಚಿದ್ದಾರೆ.

ಇಲ್ಲಿನ ಸೋಮಲಿಂಗೇಶ್ವರ (ಬಾಚೇಶ್ವರ) ದೇವಾಲಯದ ಸ್ತಂಭಕ್ಕೆ ಇರುವ ಕ್ರಿ.ಶ. 12ನೇ ಶತಮಾನದ ಶಾಸನದಲ್ಲಿ 300 ಮಹಾಜನರ ಉಲ್ಲೇಖವಿದ್ದು, ಮುಕ್ಕುಂದಿ ಗ್ರಾಮವು ಆ ಕಾಲದ ಅಗ್ರಹಾರವಾಗಿತ್ತು ಎಂದು ಶಾಸನ ತಿಳಿಸುತ್ತದೆ.

ADVERTISEMENT

ಇದೇ ಗ್ರಾಮದ ಭೈರಪ್ಪನ ಗುಡ್ಡದ ದೊಡ್ಡಗುಂಡಿಗೆ ಇರುವ ಕಣಶಿಲೆಯ ಕ್ರಿ.ಶ 11-12ನೇ ಶತಮಾನದ ಶಾಸನದಲ್ಲಿ ಭೈರವೇಶ್ವರ ದೇವರಿಗೆ ಭೋಗೋಜನೆಂಬ ವ್ಯಕ್ತಿ ಹೊಲವನ್ನು ದಾನ ನೀಡುವುದರೊಂದಿಗೆ ಮನೆಗಳ ಮೇಲೆ ಹಾಕುತ್ತಿದ್ದ ತೆರಿಗೆ ವಿನಾಯಿತಿ ನೀಡಿದ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಶಾಸನದ ಮುಂಬದಿಯಲ್ಲಿ ಭೈರವ ದೇವರ ನಿಂತ ಭಂಗಿಯ ಗೀರು ಚಿತ್ರವನ್ನು ಮೂಡಿಸಲಾಗಿದೆ.

ಸೋಮಲಿಂಗೇಶ್ವರ ದೇವಾಲಯದ ಆವರಣದಲ್ಲಿರುವ ಕ್ರಿ.ಶ 18-19ನೇ ಶತಮಾನದ ಶಾಸನವು ಸ್ವಪ್ನದಲ್ಲಿ ಸರ್ಪ ಕಾಣುವಿಕೆ, ಸುಮ್ಮ ಸುಮ್ಮನೆ ಮಕ್ಕಳು ಬೆಚ್ಚಿ ಬೀಳುವುದು ಮತ್ತು ಪಶುಗಳು ಬೆದರಿದಂತೆ ವರ್ತಿಸುವುದು ಹೀಗಾದಾಗ ಸರ್ಪ ದೋಷ ನಿವಾರಣರ್ಥ ಈ ಸಿದ್ದಿ ಯಂತ್ರದ ಪ್ರಯೋಜನ ಪಡೆಯುತ್ತಿದ್ದರೆಂದು ಲಿಪಿಯಲ್ಲಿ ಹೇಳಲಾಗಿದೆ ಎಂದು ಚನ್ನಬಸಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸೋಮಲಿಂಗೇಶ್ವರ ದೇವಾಲಯದ ವೃತ್ತಿನಲ್ಲಿರುವ ಕಂಚಿನ ಗಂಟೆಯ ಶಾಸನವು ಚಿಕ್ಕಪ್ಪಯ್ಯನು ಭಾಸ್ಕರೇಶ್ವರಗೆ (ಬಾಚೇಶ್ವರ) ಕಟ್ಟಿಸಿದ ಗಂಟೆ ಎಂದು ಉಲ್ಲೇಖಿಸುತ್ತದೆ ಮತ್ತು ಮುರಹರಿ ದೇವಾಲಯದ ಕಂಚಿನ ಗಂಟೆಯು ಕ್ರಿ.ಶ 20ನೇ ಶತಮಾನದ ಗಂಟೆಯ ಶಾಸನವು ಭೀಮಪ್ಪ ಹನುಮಂತಪ್ಪ ಸಂಗಾಪೂರ ಚಿಕ್ಕಬೇರಿ ಅವರ ಕಾಣಿಕೆ ಎಂದು ತಿಳಿಸುತ್ತದೆ ಎಂದು ವಿವರಿಸಿದ್ದಾರೆ.

ಈ ಶಾಸನಗಳ ಕ್ಷೇತ್ರ ಕಾರ್ಯದಲ್ಲಿ ಬಸನಗೌಡ ಹುಡಾ, ವಿರೂಪಾಕ್ಷಿ ಪೂಜಾರ ಸೋಮಲಾಪುರ, ಭೀಮೇಶ ಶ್ರೀಪುರಂ ಜಂಕ್ಷನ್ ಮತ್ತು ಸ್ಥಳೀಯರು ನೆರವಾಗಿದ್ದಾರೆ ಎಂದು ಸಂಶೋಧಕ ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.