ADVERTISEMENT

ರಾಯಚೂರು: ಜಿಲ್ಲಾ ಕಸಾಪ ಚುನಾವಣೆ: ರಂಗಣ್ಣ ಪಾಟೀಲ ಗೆಲುವು

ಒಂಭತ್ತು ಮತಗಟ್ಟೆಗಳಲ್ಲಿ 3,872 ಮತಗಳು ಚಲಾವಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 15:35 IST
Last Updated 21 ನವೆಂಬರ್ 2021, 15:35 IST
ರಾಯಚೂರು ತಹಶೀಲ್ದಾರ್‌ ಕಚೇರಿ ಮತಗಟ್ಟೆಯಲ್ಲಿ ಸರದಿಯಲ್ಲಿ ಮತದಾರರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಭಾನುವಾರ ಮತ ಚಲಾಯಿಸಿದರು
ರಾಯಚೂರು ತಹಶೀಲ್ದಾರ್‌ ಕಚೇರಿ ಮತಗಟ್ಟೆಯಲ್ಲಿ ಸರದಿಯಲ್ಲಿ ಮತದಾರರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಭಾನುವಾರ ಮತ ಚಲಾಯಿಸಿದರು   

ರಾಯಚೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ರಂಗಣ್ಣ ಪಾಟೀಲ ಅಳ್ಳುಂಡಿ ಅವರು ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಭೀಮನಗೌಡ ಇಟಗಿ ಅವರ ವಿರುದ್ಧ 329 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ. ರಂಗಣ್ಣ ಪಾಟೀಲ ದೇವದುರ್ಗ ನಿವಾಸಿಯಾಗಿದ್ದು ಸಾಹಿತ್ಯಾಭಿಮಾನಿಯಾಗಿದ್ದಾರೆ. ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.

ರಾಯಚೂರು ನಗರ, ಕೊಟ್ನೆಕಲ್‌ ಹಾಗೂ ಮಸ್ಕಿಯಲ್ಲಿ ಭೀಮನಗೌಡ ಇಟಗಿ ಅವರು ಬಹುಮತ ಕಾಯ್ದುಕೊಂಡಿದ್ದರು. ಲಿಂಗಸುಗೂರು, ದೇವದುರ್ಗ, ಸಿಂಧನೂರು ಹಾಗೂ ಮಾನ್ವಿಗಳಲ್ಲಿ ರಂಗಣ್ಣ ಪಾಟೀಲ ಅವರು ಭಾರಿ ಅಂತರದಲ್ಲಿ ಮತಗಳನ್ನು ಪಡೆದಿರುವುದು ಗೆಲುವಿಗೆ ನೆರವಾಗಿದೆ. ಒಟ್ಟು ಚಲಾವಣೆಯಾದ 3,872 ಮತಗಳ ಪೈಕಿ 44 ಮತಗಳು ತಿರಸ್ಕೃತವಾಗಿವೆ. ಮೂರು ಟೆಂಡರ್‌ (ಮತ ನೀಡದ) ಮತಗಳಾಗಿವೆ.

ADVERTISEMENT

ಒಟ್ಟು 6,084 ಮತಗಳ ಮತದಾರರ ಪೈಕಿ 3,872 ಮತದಾರರು ಹಕ್ಕು ಚಲಾಯಿಸಿದ್ದಾರೆ. ರಾಯಚೂರು ನಗರದಲ್ಲಿ 798, ಮಾನ್ವಿ 703, ಹಿರೇಕೊಟ್ನೆಕಲ್‌ 255, ಸಿರವಾರ 293, ಸಿಂಧನೂರು 618, ಲಿಂಗಸುಗೂರು 485, ಮಸ್ಕಿ 226 ಹಾಗೂ ದೇವದುರ್ಗ 494 ಮತಗಳು ಚಲಾವಣೆಯಾಗಿವೆ.

ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದ ಮತದಾನವು ಸಂಜೆ 4 ಗಂಟೆಗೆ ಮುಕ್ತಾಯವಾಯಿತು. ಆಯಾ ಮತಗಟ್ಟೆಗಳಲ್ಲೇ ಮತಗಳ ಎಣಿಕೆ ಮಾಡಲಾಯಿತು, ಜಿಲ್ಲಾ ಕೇಂದ್ರದಲ್ಲಿ ಮತಗಳ ಎಣಿಕೆ ಕ್ರೋಢೀಕರಿಸಿ ರಾತ್ರಿ 7.15 ಕ್ಕೆ ಚುನಾವಣೆ ಅಧಿಕಾರಿ ಡಾ.ಹಂಪಣ್ಣ ಸಜ್ಜನ್‌ ಅವರು ಫಲಿತಾಂಶ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.