ADVERTISEMENT

ಜನರ ವಿಶ್ವಾಸ ಕಳೆದುಕೊಂಡ ಬಿಜೆಪಿ: ಸಲೀಂ ಅಹ್ಮದ್

ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಕಾಂಗ್ರೆಸ್‌ ಸಭೆ ನಾಳೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:56 IST
Last Updated 16 ಆಗಸ್ಟ್ 2021, 14:56 IST
ರಾಯಚೂರಿನ ಸಂತೋಷ ಹಬ್‌ನಲ್ಲಿ ನಡೆಯುವ ವಿಭಾಗೀಯ ಮಟ್ಟದ ಕಾಂಗ್ರೆಸ್ ಸಭೆಯ ಪೂರ್ವ ತಯಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೋಮವಾರ ಪರಿಶೀಲಿಸಿದರು
ರಾಯಚೂರಿನ ಸಂತೋಷ ಹಬ್‌ನಲ್ಲಿ ನಡೆಯುವ ವಿಭಾಗೀಯ ಮಟ್ಟದ ಕಾಂಗ್ರೆಸ್ ಸಭೆಯ ಪೂರ್ವ ತಯಾರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೋಮವಾರ ಪರಿಶೀಲಿಸಿದರು   

ರಾಯಚೂರು: ಬಿಜೆಪಿ ಸರ್ಕಾರವು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಈಗ ಜನರ ವಿಶ್ವಾಸವನ್ನು ಬಿಜೆಪಿ ಕಳೆದುಕೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಟೀಕಿಸಿದರು.

ಸೋಮವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿ ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಬೇಕಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಮುಖಂಡರ ವಿಭಾಗೀಯ ಮಟ್ಟದ ಸಭೆಯನ್ನು ರಾಯಚೂರಿನ ಸಂತೋಷ ಹಬ್‌ನಲ್ಲಿ ಆಗಸ್ಟ್ 17ರಂದು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಲ್ಯಾಣ ಕರ್ನಾಟಕ ವಿಭಾಗದ ಮುಖಂಡರೆಲ್ಲರೂ ಭಾಗವಹಿಸುತ್ತಿದ್ದಾರೆ ಎಂದರು.

ADVERTISEMENT

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ನೆರಳಿನ ರೀತಿ ಆಡಳಿತ ನಡೆಸುತ್ತಿದ್ದಾರೆ. ಈಗಾಗಲೇ ಕುರ್ಚಿಗಾಗಿ ಗುದ್ದಾಟ ಆರಂಭಿವಾಗಿದ್ದು, ಇದೊಂದು ಹೃದಯ, ಬುದ್ಧಿ ಇಲ್ಲದ ನಿರ್ಜೀವ ಸರ್ಕಾರ. ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ದೊರಕದೇ ಸಾಕಷ್ಟು ಜನ ಸಾವಿಗೀಡಾದರು. ದುರಂತ ನಡೆದ ಸ್ಥಳಕ್ಕೆ ಇಲ್ಲಿಯವರೆಗೂ ಮುಖ್ಯಮಂತ್ರಿ ಭೇಟಿ ನೀಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕೊರೊನಾದಿಂದ 3.27 ಲಕ್ಷ ಜನ ಮೃತಪಟ್ಟಿದ್ದಾರೆ. 30 ಸಾವಿರ ಜನರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ವರ್ಷದಲ್ಲಿ ಬರೀ ಸುಳ್ಳುಗಳಿಂದಲೇ ಆಡಳಿತ ನಡೆಸಿದ್ದಾರೆ. ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುವುದಾಗಿ ಜನರಿಗೆ ಸುಳ್ಳು ಹೇಳಿ ಈಗ ಜನರಿಗೆ ನರಕ ತೋರಿಸುತ್ತಿದ್ದಾರೆ. ಕೊರೊನಾ ವೇಳೆ ಬಿಡುಗಡೆ ಮಾಡಿದ ₹20 ಲಕ್ಷ ಕೋಟಿ ಪ್ಯಾಕೇಜ್, ಪಿಎಂ ಕೇರ್‌ನಿಂದ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು ಎಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ ಎಂದು ಆಪಾದಿಸಿದರು.

ಕಾಂಗ್ರೆಸ್‌ನಿಂದ ರಾಜ್ಯದಾದ್ಯಂತ ನಡೆಸಿದ ಸಹಾಯಹಸ್ತ ಕಾರ್ಯಕ್ರಮದಲ್ಲಿ ಸುಮಾರು 2.5 ಕೋಟಿ ಜನರಿಗೆ ಅನುಕೂಲವಾಗಿದೆ. 58 ಕೋಟಿ ಮಾಸ್ಕ್ ವಿತರಿಸಲಾಗಿದೆ. 94 ಲಕ್ಷ ಬಡವರಿಗೆ ಆಹಾರ ಕಿಟ್, 3.25 ಲಕ್ಷ ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 1300 ಅಂಬುಲೆನ್ಸ್ ಸೇವೆಗೆ ನೀಡಲಾಗಿದೆ ಎಂದು ವಿವರಿಸಿದರು.

ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ, ಶಾಸಕ ದದ್ದಲ್ ಬಸನಗೌಡ, ಕೆಪಿಸಿಸಿ ವಕ್ತಾರ ಎ.ವಸಂತಕುಮಾರ, ಮುಖಂಡರಾದ ಶರಣಪ್ಪ ಮಟ್ಟೂರು, ಸೈಯದ್ ಯಾಸಿನ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.