ರಾಯಚೂರು: ಜಿಲ್ಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಸತತ ಮಳೆಯಿಂದ ಮುಂಗಾರು ಬೆಳೆಗಳಲ್ಲಿ ಹಾನಿಯುಂಟಾಗುವ ಸಂಭವವಿದೆ.
ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ವಿವಿಧ ಗ್ರಾಮಗಳ ಬೆಳೆಗಳ ವೀಕ್ಷಣೆ ಮಾಡಿದ್ದು, ರೈತರು ತಮ್ಮ ಜಮೀನಿನಲ್ಲಿ ನೀರು ನಿಂತಿರುವುದು ಹೊರಗೆ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.
ಸತತ ಮಳೆಯಿಂದ ಜಮೀನಿನಲ್ಲಿ ನೀರು ನಿಲ್ಲುವುದರಿಂದ ತೊಗರಿ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳಲ್ಲಿ ಸಸಿ ಕೊಳೆ ರೋಗ ಮತ್ತು ನೆಟೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇವುಗಳ ಹತೋಟಿಗೆ ಪ್ರತಿ ಲೀಟರ್ ನೀರಿಗೆ 3 ರಿಂದ 5 ಗ್ರಾಂ ಟ್ರೈಕೋಡರ್ಮಾ ಜೈವಿಕ ಶೀಲೀಂದ್ರ ನಾಶಕದ ಪುಡಿಯನ್ನು ಅಥವಾ 2 ಗ್ರಾಂ ಕಾರ್ಬಂಡ್ಯಾಜಿಮ್ 20 ಡಬ್ಲೂ ಪಿ ಯನ್ನು ಬೆರಸಿ ಗಿಡದ ಬುಡಕ್ಕೆ ಹಾಕಬೇಕು(ಡ್ರೆಂಚಿಂಗ್). ಮೆಣಸಿನಕಾಯಿ ಮತ್ತು ಹತ್ತಿ ಬೆಳೆಯಲ್ಲಿ ಸಸಿ ಕೊಳೆ ರೋಗ ಕಂಡುಬಂದಲ್ಲಿ 4 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 1.5 ಗ್ರಾಂ ಮೆಟಲಾಕ್ಸಿಲ್ ಶೇ 4 ಎಂï+ಮ್ಯಾಂಕೋಜೆಬ್ ಶೇಕಡ64 ಡಬ್ಲೂ ಪಿ ಶೀಲೀಂದ್ರ ನಾಶಕವನ್ನು ಬೆರಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.
ಜಮೀನಿನ ಸುತ್ತ ಬಸಿಗಾಲುವೆಗಳನ್ನು ಮಾಡಿ ನಿಂತ ನೀರನ್ನು ಹೊರ ತೆಗೆಯಬೇಕು. ಪ್ರತಿ ಲೀಟರ್ ನೀರಿಗೆ 5 ಗ್ರಾಂ 19:19:19 +5 ಗ್ರಾಂ 13:0:45 ನ್ನು ಬೆರಸಿ ಸಿಂಪಡಿಸಬೇಕು. ಮಳೆಯ ಪ್ರಮಾಣ ಕಡಿಮೆಯಾದ ಮೇಲೆ ಎಡೆ ಕುಂಟೆ ಒಡೆದು ಕಳೆಗಳನ್ನು ನಿಯಂತ್ರಿಸಬೇಕು. ತೊಗರಿಯಲ್ಲಿ ಪ್ರತಿ ಲೀಟರ್ ನೀರಿಗೆ 3 ಮೀಲೀ ಪ್ರೊಪೋಕ್ವಿಜೋಪಾಪ್(2.5%)+ ಇಮ್ಯಾಜತಾಪೈರ್(3.75%) ಕಳೆನಾಶಕ ಸಿಂಪರಣೆ ಮಾಡಬೇಕು, ಹತ್ತಿಯಲ್ಲಿ ಬಿತ್ತಿದ 20 ರಿಂದ 25 ದಿನಗಳ ನಂತರ 1.5-2 ಮೀಲೀ ಪೈರಿತಯೋಬ್ಯಾಕ್ ಸೋಡಿಯಂ ಕಳೆನಾಶಕ ಸಿಂಪರಣೆ ಮಾಡಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ನಾಯಕ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಧಾರಣ ಮಳೆ: ರಾಯಚೂರು, ದೇವದುರ್ಗ, ಕವಿತಾಳ, ಸಿರವಾರ, ಜಾಲಹಳ್ಳಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ 5.8 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಜುಲೈ 30ರ ವರೆಗೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಗ್ರಾಮೀಣ ಕೃಷಿ ಹವಾಮಾನ ಘಟಕ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.