ADVERTISEMENT

ರಂಜಾನ್: ವ್ಯಾಪಾರದ ಮೇಲೆ ಬರದ ಛಾಯೆ

ಜಿಲ್ಲೆಯ ವಿವಿಧೆಡೆಯಿಂದ ಬಟ್ಟೆ ಖರೀದಿಗಾಗಿ ಜನರು ಬರುತ್ತಿದ್ದರು

ನಾಗರಾಜ ಚಿನಗುಂಡಿ
Published 3 ಜೂನ್ 2019, 15:40 IST
Last Updated 3 ಜೂನ್ 2019, 15:40 IST
ಮನ್ಸೂರ್‌ಒಣಹಣ್ಣುಗಳ ವ್ಯಾಪಾರಿ
ಮನ್ಸೂರ್‌ಒಣಹಣ್ಣುಗಳ ವ್ಯಾಪಾರಿ   

ರಾಯಚೂರು: ಮುಸ್ಲಿಮರ ಪವಿತ್ರವಾದ ‘ಖುರಾನ್‌’ ಧರ್ಮಗ್ರಂಥವು ಮೊಹ್ಮದ್‌ ಪೈಗಂಬರ್‌ರ ಮೂಲಕ ಅವತರಣವಾದ ತಿಂಗಳನ್ನು ರಂಜಾನ್‌ ಎಂದು ಆಚರಿಸಲಾಗುತ್ತದೆ. ಇಸ್ಲಾಂ ಕ್ಯಾಲೆಂಡರ್‌ನ ಒಂಭತ್ತನೇ ತಿಂಗಳಲ್ಲಿ ರಂಜಾನ್‌ ಹಬ್ಬ. ಈ ತಿಂಗಳುಪೂರ್ತಿ ಉಪವಾಸ ಆಚರಿಸಿರುವ ಮುಸ್ಲಿಮರು, ಕೊನೆಯ ದಿನದಂದು ಚಂದ್ರಮನ ದರ್ಶನದೊಂದಿಗೆ ಹಬ್ಬ ಆಚರಿಸುವರು.

ಜೂನ್‌ 5 ರಂದು ರಂಜಾನ್‌ ಕೊನೆಯ ದಿನವಾಗಿದ್ದು, ಜೂನ್‌ 4 ರ ರಾತ್ರಿಯಿಡೀ ‘ಚಾಂದ್‌ ಕಾ ರಾತ್‌’ ಮಾಡಲಾಗುತ್ತದೆ. ಈದ್‌ ಉಲ್‌ ಪಿತರ್‌ ನಿಮಿತ್ತ ದಾನ, ಧರ್ಮ ಮಾಡುವುದು ಹಾಗೂ ಶುಭ್ರವಾದ ವಸ್ತ್ರಗಳನ್ನು ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ರಾಯಚೂರು ಜಿಲ್ಲೆಯಾದ್ಯಂತ ಪ್ರತಿ ವರ್ಷವೂ ರಂಜಾನ್‌ ವಿಶೇಷ ಸಂಭ್ರಮ, ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಬರಗಾಲದಿಂದ ತತ್ತರಿಸಿರುವ ರಾಯಚೂರು, ದೇವದುರ್ಗ, ಲಿಂಗಸುಗೂರು ಹಾಗೂ ಮಾನ್ವಿ ತಾಲ್ಲೂಕುಗಳಲ್ಲಿ ಈ ವರ್ಷ ರಂಜಾನ್‌ ನಿಮಿತ್ತ ಖರೀದಿ ಭರಾಟೆ ಎಂದಿನಂತಿಲ್ಲ. ರಂಜಾನ್‌ ಮಾಸದ 20 ನೇ ದಿನದಿಂದಲೇ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಆರಂಭವಾಗುತ್ತಿತ್ತು. ಈ ವರ್ಷ ಹಬ್ಬದ ಆಗಮನ ಎರಡೇ ದಿನಗಳಿದ್ದರೂ ರಾಯಚೂರು ಮಾರುಕಟ್ಟೆಯಲ್ಲಿ ಜನಸಂದಣಿ ಕಾಣುತ್ತಿಲ್ಲ.

ADVERTISEMENT

‘ಸರಿಯಾಗಿ ಮಳೆಯಾದರೆ ಮಾತ್ರ ಎಲ್ಲರೂ ಸುಖದಿಂದ ಇರುವುದಕ್ಕೆ ಸಾಧ್ಯ. ರಾಯಚೂರು ಸುತ್ತಮುತ್ತಲಿನ ಜನರೆಲ್ಲರೂ ಪ್ರತಿವರ್ಷ ಮಾರುಕಟ್ಟೆಗೆ ಖರೀದಿಗೆ ಬರುತ್ತಿದ್ದರು. ಈ ವರ್ಷ ಗ್ರಾಮೀಣ ಜನರು ಅಷ್ಟೊಂದು ಖರೀದಿ ಮಾಡುತ್ತಿಲ್ಲ. ಶಾವಿಗೆ ಹಾಗೂ ಸ್ವಲ್ಪ ಒಣಹಣ್ಣುಗಳನ್ನು ಮಾತ್ರ ಖರೀದಿಸಿ ಹಬ್ಬ ಮಾಡುವ ಸ್ಥಿತಿ ಬಂದಿದೆ. ಬಟ್ಟೆಬರೆ ಖರೀದಿ ಜೋರಾಗಿಲ್ಲ. ಸತತ ಬರಗಾಲ ಇದ್ದುದರಿಂದ ಜನರು ಆರ್ಥಿಕವಾಗಿ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ’ ಎಂದು 20 ವರ್ಷಗಳಿಂದ ಸೂಪರ್‌ ಮಾರ್ಕೆಟ್‌ನಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಮೆಹಬೂಬ್‌ ಅವರು ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

ಅಗ್ಗದ ಸರಕುಗಳು: ರಂಜಾನ್‌ ನಿಮಿತ್ತ ರಾಯಚೂರಿನ ಸೂಪರ್‌ ಮಾರ್ಕೆಟ್‌ನಲ್ಲಿ ಮಳಿಗೆಯೊಳಗಿನ ವ್ಯಾಪಾರಕ್ಕಿಂತಲೂ ರಸ್ತೆಬದಿ ವ್ಯಾಪಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಮಕ್ಕಳ ಬಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಅಗ್ಗದ ಸರಕುಗಳಿಗೆ ಜನರು ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂತು.

ಮೆಹಂದಿ, ಶಾವಿಗೆ ಮತ್ತು ಒಣಹಣ್ಣುಗಳ ವ್ಯಾಪಾರ, ಸುಗಂಧದ್ರವ್ಯಗಳ ವ್ಯಾಪಾರ ಯತ್ತೇಚ್ಛವಾಗಿತ್ತು. ಆದರೆ, ಪ್ರತಿ ವರ್ಷದಂತೆ ಈ ವರ್ಷ ವ್ಯಾಪಾರ ನಡೆಯುತ್ತಿಲ್ಲ ಎನ್ನುವ ನಿರಾಸೆಯ ಮಾತುಗಳು ವ್ಯಾಪಾರಿಗಳಲ್ಲಿ ಸಾಮಾನ್ಯವಾಗಿತ್ತು.

‘ಮನೆಮಂದಿಗೆಲ್ಲ ಎರಡರಿಂದ ಮೂರು ಜೊತೆ ಬಟ್ಟೆಗಳನ್ನು ಖರೀದಿ ಮಾಡುತ್ತಿದ್ದೇವು. ಈ ವರ್ಷ ಮಕ್ಕಳಿಗೆ ಮಾತ್ರ ಬಟ್ಟೆ ಖರೀದಿಸುವ ಪರಿಸ್ಥಿತಿ ಇದೆ. ಶೋ ರೂಂಗಳಿಗೆ ಹೋಗಿ ಖರೀದಿಸುವುದು ಎಲ್ಲಿಯೂ ಕಾಣುತ್ತಿಲ್ಲ. ಬರಗಾಲದಿಂದ ಎಲ್ಲರ ಕೈ ಖಾಲಿಯಾಗಿದೆ’ ಎಂದು ಖಾಸಿಂ ಹೇಳಿದರು.

ಕೊನೆಯ ದಿನದ ತಯಾರಿ
ರಂಜಾನ್‌ ತಿಂಗಳಿನ ಕೊನೆಯ ದಿನ ನಡೆಯುವ ಈದ್‌ ಉಲ್‌ ಪಿತರ್‌ ಇನ್ನೂ ವಿಶೇಷತೆಯಿಂದ ಕೂಡಿರುತ್ತದೆ. ರಾಯಚೂರಿನ ಈದ್ಗಾ ಮೈದಾನದಲ್ಲಿ ಮುಸ್ಲಿಮರೆಲ್ಲರೂ ಶುಭ್ರ ವಸ್ತ್ರ ಧರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ರಾಯಚೂರಿನಲ್ಲಿ 100 ಕ್ಕೂ ಹೆಚ್ಚು ಮಸೀದಿಗಳಿವೆ.

ಮಾರ್ಕೆಟ್‌ ಜಾಮಿಯಾ ಮಸೀದಿ, ಸರಾಫ್‌ ಬಜಾರ್‌ ಜಾಮೀಯಾ ಮಸೀದಿ, ಏಕಮಿನಾರ್‌ ಮಸೀದಿ, ಫಾಮಿಯಾ ಮಸೀದಿ, ಮಸೀದಿ ಅಸ್ಸಾ, ಫಜಲುದ್ದೀನ್‌ ಮಸೀದಿ, ಉರುಫ್‌ ಮಸೀದಿ, ಜಹೀರಾಬಾದ್‌ ಜಾಮೀಯಾ ಮಸೀದಿ, ಉಸ್ಮಾನಿಯಾ ಮಸೀದಿ.. ಪ್ರತಿ ಮಸೀದಿಗಳಲ್ಲೂರಂಜಾನ್‌ ನಿಮಿತ್ತ ಸಾಮೂಹಿಕ ಪ್ರಾರ್ಥನೆಗಳು ನಡೆಯುತ್ತವೆ.

ಹಬ್ಬದ ಕೊನೆಯ ದಿನದಂದು ನಡೆಯುವ ಆಚರಣೆಗಾಗಿ ಈಗಾಗಲೇ ಭರದಿಂದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.