ಲಿಂಗಸುಗೂರು: ಪಟ್ಟಣದ ಈಶ್ವರ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ಕೊಳಚೆ ನೀರಿನಲ್ಲಿಯೇ ಅಡ್ಡಾಡುವ ಪರಿಸ್ಥಿತಿ ಇದ್ದು ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಮತ್ತು ಸುತ್ತಲಿನ ಮನೆಗಳ ಬಚ್ಚಲು ನೀರು ಹರಿದು ಹೋಗಲು ಸುಮಾರು ವರ್ಷಗಳ ಹಿಂದೆ ಚರಂಡಿ ನಿರ್ಮಾಣ ಮಾಡಲಾಗಿದೆ. ಅದು ಚಿಕ್ಕದಾಗಿದ್ದರಿಂದ, ಹೂಳು ತೆಗೆಯದ್ದರಿಂದ ಸಮಸ್ಯೆಯಾಗಿದೆ ಜನ ಅಸಮಾಧಾನ ಹೊರಹಾಕಿದ್ದಾರೆ.
ಈ ಮಾರ್ಗವಾಗಿ ಅನೇಕ ಶಾಲೆ, ದೇವಸ್ಥಾನ ಇರುವುದರಿಂದ ಹೆಚ್ಚಿನ ಜನ ಸಂಚರಿಸುತ್ತಾರೆ. ಗಡಿಯಾರ ವೃತ್ತದಿಂದ ಮುಕ್ತಿಧಾಮ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ನೆಲ ಅಗೆಯುವ ವೇಳೆ ಚರಂಡಿ ಧ್ವಂಸವಾಗಿದ್ದರಿಂದ ಕೊಳಚೆ ನೀರು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಲ್ಲಿ ನಿಲ್ಲುತ್ತದೆ. ಮನೆಗಳ ಬಾಗಿಲುವರೆಗೆ ನೀರು ನಿಂತಿವೆ. ಈ ಬಗ್ಗೆ ಪುರಸಭೆ ಆಡಳಿತಕ್ಕೆ ಸಾಕಷ್ಟು ಸಲ ಮೌಖಿಕ ಮತ್ತು ಲಿಖಿತ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಿವಾಸಿಗಳು.
ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಇಲ್ಲಿನ ನಿವಾಸಿಗಳಾದ ಮಲ್ಲಿಕಾರ್ಜುನ ಪಾಟೀಲ, ಬಸನಗೌಡ, ರಾಜು ಆಗ್ರಹಿಸಿದ್ದಾರೆ.
ಈಶ್ವರ ದೇವಸ್ಥಾನ ಪಕ್ಕದಲ್ಲಿ ರಸ್ತೆಯಲ್ಲಿ ಚರಂಡಿ ನೀರು ನಿಲ್ಲುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಸಿಬ್ಬಂದಿ ಕಳುಹಿಸಿ ಸಮಸ್ಯೆ ಪರಿಹರಿಸುವೆ ಎಂದು ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಂಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.