ಲಿಂಗಸುಗೂರು: ತಾಲ್ಲೂಕಿನ ಕೃಷ್ಣಾ ನದಿ ತಟದಲ್ಲಿರುವ ಹಂಚಿನಾಳ ಗ್ರಾಮದಲ್ಲಿನ ಕುಡಿಯುವ ನೀರಿನ ಬಾವಿಗೆ ಕೆರೆ ನೀರು ನುಗ್ಗಿ ಕಲುಷಿತಗೊಂಡಿದ್ದರಿಂದ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿರುವ ಕೆರೆಯ ಒಡ್ಡು ಒಡೆದು ಕಲಷಿತ ನೀರು ಕುಡಿಯುವ ನೀರಿಗಾಗಿ ಆಸರೆಯಾಗಿದ್ದ ತೆರೆದ ಬಾವಿಗೆ ನುಗ್ಗಿದೆ. ಇದರಿಂದ ಬಾವಿ ನೀರು ಸಂಪೂರ್ಣ ಗಲೀಜಾಗಿ ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹವಾಮಾನ ಬದಲಾವಣೆಯಿಂದ ಎಲ್ಲಡೆ ವೈರಲ್ ಜ್ವರ ಕಂಡು ಬರುತ್ತಿದ್ದು, ಗ್ರಾಮದಲ್ಲಿ ಬಾವಿ ನೀರು ಕಲುಷಿತಗೊಂಡಿದ್ದರಿಂದ ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ.
ಗ್ರಾಮದಲ್ಲಿ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಹಲವು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾದಾಗ ಕೆಲವೇ ತಿಂಗಳು ಕಾಲ ನೀರು ಒದಗಿಸಿದೆ. ನಂತರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ವಹಣೆ ಕೊರತೆಯಿಂದಾಗಿ ಇದು ಕೆಟ್ಟು ನಿಂತಿದೆ.
ರಿಪೇರಿ ನೆಪದಲ್ಲಿ ಹಣ ಖರ್ಚು ಮಾಡಲಾಗಿದೆಯೇ ವಿನಾಃ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ. ಈಗಿರುವ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸದೇ ಗ್ರಾಮದ ಹೊರವಲಯದಲ್ಲಿ ತಿಪ್ಪೆಗುಂಡಿ ಹಾಗೂ ಶೌಚಾಲಯದ ಬಳಿ ಹೊಸದಾಗಿ ಶುದ್ಧ ನೀರಿನ ಘಟಕ ಅಳವಡಿಸುವ ಕೆಲಸ ನಡೆದಿದೆ. ಆದರೆ, ಕೆಲಸ ಪೂರ್ತಿಯಾಗಿಲ್ಲ.
‘ಗ್ರಾಮದಲ್ಲಿ ಸಾಕಷ್ಟು ಜಾಗವಿದ್ದರೂ ಶೌಚಾಲಯದ ಬಳಿ ನೀರಿನ ಘಟಕ ಅಳವಡಿಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರೂ ಅಲ್ಲಿಯೇ ಕಾಮಗಾರಿ ಮಾಡುತ್ತಿದ್ದಾರೆ’ ಎಂದು ಶಂಕರಗೌಡ ಪಾಟೀಲ ಹೇಳುತ್ತಾರೆ.
ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇಲ್ಲದೆ ಗ್ರಾಮಸ್ಥರು ಬೈಕ್, ಆಟೊಗಳ ಮೂಲಕ ಲಿಂಗಸುಗೂರು ಪಟ್ಟಣ, ಶೀಲಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಶುದ್ಧ ನೀರು ತರುತ್ತಿದ್ದಾರೆ. ಇದು ನಿತ್ಯದ ಕಾಯಕವಾಗಿದೆ.
‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದರಿಂದ ಅಕ್ಕಪಕ್ಕದ ಗ್ರಾಮಗಳಿಗೆ ನೀರಿಗಾಗಿ ಅಲೆದಾಡುವಂತಾಗಿದೆ. ಕೊಚ್ಚಿಹೋಗಿರುವ ರಸ್ತೆಯನ್ನು ಶೀಘ್ರವೇ ದುರಸ್ತಿ ಮಾಡಿ ಸಾರ್ವಜನಿಕರು, ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆ ನಿವಾರಿಸಬೇಕು’ ಎಂದು ಬಸೆಟ್ಟಿ ನಾಯಕ, ಬಾಲಪ್ಪ, ಮಂಜುನಾಥ ಮಿಂಚೇರಿ, ಬಾಲಪ್ಪ ನಾಯಕ, ಹಂಚಿನಾಳ ಆಗ್ರಹಿಸಿದ್ದಾರೆ.
ಕೆರೆಯ ಒಡ್ಡು ಒಡೆದು ಬಾವಿಗೆ ನೀರು ನುಗ್ಗಿ ನೀರು ಕಲುಷಿತವಾಗಿತ್ತು. ಬಾವಿಯಲ್ಲಿ ನೀರು ಹೊರ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆಬಸಯ್ಯ ಸ್ವಾಮಿ, ಪಿಡಿಒ ಗುಂತಗೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.