ADVERTISEMENT

ರಾಯಚೂರು | ಸಿಗದ ಶುದ್ಧ ಕುಡಿಯುವ ನೀರು...: ಸಾರ್ವಜನಿಕರ ಪರದಾಟ

12 ಜಲ ಶುದ್ಧೀಕರಣ ಘಟಕಗಳಿದ್ದರೂ ನೀರಿಗಾಗಿ ತಪ್ಪದ ಹಾಹಾಕಾರ

ಚಂದ್ರಕಾಂತ ಮಸಾನಿ
Published 8 ಮೇ 2025, 5:25 IST
Last Updated 8 ಮೇ 2025, 5:25 IST
<div class="paragraphs"><p>ರಾಯಚೂರಿನ ಗದ್ವಾಲ್ ರಸ್ತೆಯ ಮಡ್ಡಿಪೇಟೆಯಲ್ಲಿ ಪತಿ, ಪತ್ನಿ ಮಕ್ಕಳು ನೀರು ಹೊತ್ತು ಒಯ್ಯುತ್ತಿರುವುದು.</p></div>

ರಾಯಚೂರಿನ ಗದ್ವಾಲ್ ರಸ್ತೆಯ ಮಡ್ಡಿಪೇಟೆಯಲ್ಲಿ ಪತಿ, ಪತ್ನಿ ಮಕ್ಕಳು ನೀರು ಹೊತ್ತು ಒಯ್ಯುತ್ತಿರುವುದು.

   

ಚಿತ್ರ: ಶ್ರೀನಿವಾಸ ಇನಾಮದಾರ್

ರಾಯಚೂರು: ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಗರದಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ಯೋಜನೆ ಕಳಪೆ ಕಾಮಗಾರಿಯಿಂದಾಗಿ ವಿಫಲವಾಗಿದೆ. ಬೇಸಿಗೆ ಕಾರಣ ಎರಡು ದಿನಕ್ಕೊಮ್ಮೆ ನಗರದ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೂ ಅದು ಶುದ್ಧವಾಗಿಲ್ಲ.

ADVERTISEMENT

ರಾಯಚೂರಿಗೆ ಚಿಕ್ಕಸಗೂರಿನ ಬಳಿ ಕೃಷ್ಣಾ ನದಿಗೆ ನಿರ್ಮಿಸಿದ ಜಲಾಶಯದಿಂದ 40 ಎಂಎಲ್‌ಡಿ ಹಾಗೂ ತುಂಗಭದ್ರಾ ನದಿಯಿಂದ ಸಂಗ್ರಹಿಸಲಾದ ರಾಮಪುರ ಕೆರೆಯಿಂದ 12.5 ಎಂಎಲ್‌ಡಿ ನೀರು ಸೇರಿ 52 ಎಂಎಲ್‌ಡಿ ನೀರು ಪೂರೈಕೆಯಾಗುತ್ತದೆ. ನಗರಸಭೆಯು ಮಹಾನಗರಪಾಲಿಕೆಯಾಗಿ ಪರಿವರ್ತನೆಯಾದ ನಂತರ ನೀರು ಪೂರೈಕೆ ವ್ಯಾಪ್ತಿ ಅಧಿಕವಾಗಿದೆ. ಮಹಾನಗರ ಪಾಲಿಕೆಯಲ್ಲಿ ಇನ್ನೂ ನೀರು ಪೂರೈಕೆಗೆ ಯೋಜನಾ ಬದ್ಧವಾದ ಪ್ರತ್ಯೇಕ ವಿಭಾಗ ರಚನೆಯಾಗಿಲ್ಲ. ನಗರಸಭೆಯ ಹಿಂದಿನ ಕಿರಿಯ ಎಂಜಿನಿಯರ್‌ಗಳೇ ಎಲ್ಲವನ್ನೂ ನಿಭಾಯಿಸಿಕೊಂಡು ಹೊರಟಿದ್ದಾರೆ.

ನಗರದಲ್ಲಿ ಲಕ್ಷಾಂತರ ಮನೆಗಳು ಇದ್ದರೂ ಅಧಿಕೃತ ನಳಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಇವೆ. ಅನಧಿಕೃತ ನಳಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಗೃಹ ಬಳಕೆಯ ನಳಗಳು 23,672, ವಾಣಿಜ್ಯ ಬಳಕೆ ನಳಗಳು 142, ಕೈಗಾರಿಕೆ 92, ಸೇರಿ ಒಟ್ಟು 24,086 ನಳಗಳು ಮಾತ್ರ ಇವೆ ಅಂದರೆ ಎಂಥವರಿಗೂ ಅಚ್ಚರಿ ಮೂಡಿಸುತ್ತದೆ.

ಕೈಗಾರಿಕೆಗಳು ಹಾಗೂ ವಾಣಿಜ್ಯೋದಮಿಗಳಿಂದ ಹೆಚ್ಚು ಮೋಸವಾಗುತ್ತಿದೆ. ಅನಧಿಕೃತ ನಳಗಳನ್ನು ಪಡೆದಿರುವ ಕಾರಣ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ. ಮಹಾನಗರಸಭೆಗೆ ನೀರು ಪೂರೈಕೆ ವೆಚ್ಚವೇ ಹೆಚ್ಚಾಗಿದೆ.

ಮಹಾನಗರದಲ್ಲಿ ಒಟ್ಟು 35 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 10 ಓವರ್‌ಹೆಡ್‌ ಟ್ಯಾಂಕ್‌ಗಳು ಹತ್ತು ವರ್ಷಗಳಿಂದ ಬಳಕೆಯಾಗಿಲ್ಲ. ಗುರುತ್ವಾಕರ್ಷಣೆಗೆ ಅನುಗುಣವಾಗಿ ನೀರಿನ ಪೈಪ್‌ಲೈನ್ ಅಳವಡಿಸಬೇಕು. ಆದರೆ, ಇಲ್ಲಿ ಕುಡಿಯುವ ನೀರು ಪೂರೈಕೆಗೆ ಕೆಳಗಡೆಯಿಂದ ಗುಡ್ಡದ ಮೇಲೆ ಪೈಪ್‌ ಅಳವಡಿಸಿ ಬಿಲ್‌ ಎತ್ತಲಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

’ನೀರು ಲಭ್ಯವಿದ್ದರೂ ವಿತರಣಾ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಇದೆ. ಒಟ್ಟು 12 ಫಿಲ್ಟರ್ ಬೆಡ್‌ಗಳಲ್ಲಿ ನಾಲ್ಕು ಮಾತ್ರ ಕಾರ್ಯನಿರ್ವಹಿಸುತ್ತಿವೆ.. ನಾಲ್ಕ ಘಟಕಗಳಿಗೆ ನೀರ/ಎ ಬರುತ್ತಿಲ್ಲ. ನಾಲ್ಕು ದುರಸ್ತಿಯಲ್ಲಿವೆ. ಹೀಗಾಗಿ ನಗರಕ್ಕೆ ಸ್ಪಲ್ಪ ಮಟ್ಟಿಗೆ ನೀರಿನ ಸಮಸ್ಯೆ ಎದುರಾಗಿದೆ. ಹೊಸ ಆಯುಕ್ತ ಜುಬಿನ್‌ ಅವರು ಮುತವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನಗಳು ನಡೆದಿವೆ’ ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಹೇಳುತ್ತಾರೆ.

ಕಾಟಾಚಾರದ ಸಭೆ: ಏಪ್ರಿಲ್ 12ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ನಡೆದರೂ ಮಹಾನಗರ ನೀರು ಪೂರೈಕೆ ವಿಷಯದಲ್ಲಿ ವಿಸ್ತೃತ ಚರ್ಚೆಯೇ ಆಗಲಿಲ್ಲ.

ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಎಸ್.ಶಿವರಾಜ ಪಾಟೀಲ ಅವರು ‘ರಾಯಚೂರ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ನಗರಕ್ಕೆ ನೀರು ಪೂರೈಸುವ ಪಂಪ್‌ಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಜಾಕವೆಲ್ ಸ್ಟಾರ್ಟ್ ಇಲ್ಲ. ಗಾಳಿ ಮಳೆ ಶುರುವಾದರೆ ವಿದ್ಯುತ್ ಕಡಿತವಾಗಿ ಜೆಸ್ಕಾಂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು. ಆದರೆ, ಇವತ್ತಿನ ವರೆಗೂ ಅದನ್ನು ಸರಿಪಡಿಸುವ ಕೆಲಸ ಆಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅಪರೂಪಕ್ಕೆ ಅತಿಥಿಯಂತೆ ಬಂದು ಹೋಗುತ್ತಾರೆ. ಹೀಗಾಗಿ ಕುಡಿಯುವ ನೀರಿನಂತಹ ಗಂಭೀರ ಸಮಸ್ಯೆಗಳಿಗೂ ಪರಿಹಾರ ದೊರಕುತ್ತಿಲ್ಲ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಬೇಸರ ವ್ಯಕ್ತಪಡಿಸುತ್ತಾರೆ.

ತುಂಗಭದ್ರಾ ಜಲಾಶಯಕ್ಕೆ ಕಾಲುವೆ ಮುಖಾಂತರ ನಗರದ ಹೊರವಲಯದಲ್ಲಿ ಇರುವ ರಾಂಪುರ ಕೆರೆ ಭರ್ತಿ ಮಾಡಿ ಅಲ್ಲಿಂದ ನಗರದ 14 ವಾರ್ಡ್​ಗಳಿಗೆ ನೀರು ಪೂರೈಸಲಾಗುತ್ತಿದೆ. ಈ ಮೊದಲು ಶಕ್ತಿನಗರ ಬಳಿ ಇರುವ ಕೃಷ್ಣ ನದಿಯಿಂದ 21 ವಾರ್ಡ್​ಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ರಾಯಚೂರು ನಗರಸಭೆಯಿಂದ ಮಾಡಲಾಗುತ್ತಿತ್ತು. ರಾಂಪುರ ಕರೆ ಹಾಗೂ ಕೃಷ್ಣ ನದಿಯಿಂದ ಮೆ 35 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನದಿಗಳು ಬತ್ತಿರುವ ಕಾರಣ ಎರಡು ದಿನಕ್ಕೊಮ್ಮೆ ಒಂದು ತಾಸು ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.

ರಾಯಚೂರಿನಲ್ಲಿ ಮನೆಗಳಿಗೆ ನೀರು ಪೂರೈಸುವ ಖಾಸಗಿ ಟ್ಯಾಂಕರ್
ರಾಯಚೂರಿನ ವಿದ್ಯಾನಗರದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಿದರೂ ಹತ್ತು ವರ್ಷಗಳಿಂದ ಅದನ್ನು ಬಳಸಿಕೊಂಡಿಲ್ಲ

ಶೀಘ್ರ ಟ್ಯಾಂಕರ್‌ ಖರೀದಿ

‘ಮಹಾನಗರಪಾಲಿಕೆ ಮಾರ್ಚ್ 17ರಂದು ಸಭೆ ಸೇರಿ ₹ 10ಲಕ್ಷ ವೆಚ್ಚದಲ್ಲಿ ಟ್ಯಾಂಕರ್‌ ಹಾಗೂ ಇತರೆ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ನೀಡಿದೆ. ಮುಂದಿನ 15 ವರ್ಷ ನಗರದ ಜನಸಂಖ್ಯೆಗೆ ಅನುಗುಣವಾಗಿ ರಾಂಪೂರು ಹಾಗೂ ಚಿಕ್ಕಸುಗೂರು ಜಲಾಶಯಕ್ಕೆ ಕೃಷ್ಣ ತುಂಗಭಧ್ರಾ ನದಿಯಿಂದ ನೀರು ಪೂರೈಕೆ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಡಲು ತೀರ್ಮಾನಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ಜುಬಿನ್‌ ಮೊಹಾಪಾತ್ರ ಹೇಳಿದರು.

‘ನಗರಸಭೆಯಾಗಿದ್ದ ರಾಯಚೂರು ಈಚೆಗಷ್ಟೆ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದೆ. ಸಮಸ್ಯೆಗಳು ಹಾಗೂ ಸವಾಲುಗಳು ಅಧಿಕ ಇವೆ. ಎಲ್ಲವನ್ನು ಸರಿದೂಗಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗಿದೆ’ ಎಂದು ತಿಳಿಸಿದರು.

‘ವಾಟ್ಸ್‌ಆ್ಯಪ್ ಗ್ರುಪ್‌ ರಚಿಸಿಕೊಂಡು ಅದಕ್ಕೆ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ಕುಡಿಯುವ ನೀರಿನ ಗಂಭೀರ ಸಮಸ್ಯೆಯಾಗದಂತೆ ನಿಗಾವಹಿಸಲಾಗಿದೆ‘ ಎಂದರು.

ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ದಿಸೆಯಲ್ಲಿ ಪ್ರಯತ್ನಗಳು ನಡೆದಿವೆ.
-ಮಹಾನಗರಪಾಲಿಕೆ ಆಯುಕ್ತ ಜುಬಿನ್‌ ಮೊಹಾಪಾತ್ರ
ರಾಯಚೂರು ಮಹಾನಗರದಲ್ಲಿನ ಕುಡಿಯುವ ನೀರು ಪೂರೈಕೆಯ ವಿತರಣಾ ವ್ಯವಸ್ಥೆಯನ್ನೇ ಸರಿಪಡಿಸಬೇಕಿದೆ. ತಾಂತ್ರಿಕ ಸಮಸ್ಯೆ ಹಾಗೂ ಸಿಬ್ಬಂದಿ ಕೊರತೆ ಸಮಸ್ಯೆಗೆ ಮೂಲ ಕಾರಣವಾಗಿದೆ.
-ಜಯಣ್ಣ, ನಗರಸಭೆ ಹಿರಿಯ ಸದಸ್ಯ
ಹಿಂದಿನ ವಾರ ನಾಲ್ಕು ದಿನ ನೀರೇ ಬಂದಿರಲಿಲ್ಲ. ಎರಡು ದಿನಕ್ಕೊಮ್ಮೆ ನೀರು ಪೂರೈಸಿತ್ತಿದ್ದರೂ ಅದು ಶದ್ಧವಾಗಿಲ್ಲ.
-ಮಹಮ್ಮದ್‌ಅಲಿ, ಎಲ್‌ಬಿಎಸ್‌ ನಗರದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.