ADVERTISEMENT

ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಖಡಕ್ ಎಚ್ಚರಿಕೆ

ತಾಲ್ಲೂಕು ಮಟ್ಟದ ಅಧಿಕಾರಿಗಳ, ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:05 IST
Last Updated 16 ಜನವರಿ 2026, 7:05 IST
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು   

ಪ್ರಜಾವಾಣಿ ವಾರ್ತೆ

ಸಿಂಧನೂರು: ‘ಮುಂದಿನ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ನಿಗಾವಹಿಸಬೇಕು. ಸಮಸ್ಯೆ ಉಂಟಾದರೆ ನಿಮ್ಮನ್ನೇ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಜಂಟಿಯಾಗಿ ಖಡಕ್ ಎಚ್ಚರಿಕೆ ನೀಡಿದರು.

ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಈಗಾಗಲೇ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಇಲ್ಲಿಯವರೆಗೆ ನಿತ್ಯವೂ ಹಾಗೂ ಒಂದು ದಿನ ಬಿಟ್ಟು ಒಂದು ನೀರು ಬಿಡಲಾಗುತ್ತಿತ್ತು. 7 ತಿಂಗಳು ನೀರು ನಿರ್ವಹಣೆ ಮಾಡಬೇಕಿರುವುದರಿಂದ ನೀರಿನ ಲಭ್ಯತೆ ಆಧರಿಸಿ ಕನಿಷ್ಟ 5 ರಿಂದ 8 ದಿನಕ್ಕೊಮ್ಮೆ ನೀರು ಕೊಡಿ. ನಿಮ್ಮ ವ್ಯಾಪ್ತಿಯಲ್ಲಿ ಖಾಸಗಿ ಕೆರೆಗಳಿದ್ದರೆ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು’ ಎಂದರು.

ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ,‘ಸಿಂಧನೂರು ನಗರದ ಎಲ್ಲ ಕೆರೆಗಳನ್ನು ತುಂಬಿಸಿಕೊಳ್ಳಲಾಗಿದೆ. ಪ್ರಸ್ತುತ ನಗರದಲ್ಲಿ 5 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. 7 ತಿಂಗಳು ನೀರು ನಿರ್ವಹಣೆ ಮಾಡಬೇಕಿರುವುದರಿಂದ ಮುಂದಿನ ದಿನಗಳಲ್ಲಿ 8-9 ದಿನಕ್ಕೊಮ್ಮೆ ನೀರು ಬಿಡಲು ಕ್ರಮ ವಹಿಸಲಾಗುವುದು’ ಎಂದರು.

‘ರಾಯಚೂರು ಉತ್ಸವ ಮಾದರಿಯಾಗಲಿ’

ರಾಯಚೂರು ಜಿಲ್ಲಾ ಉತ್ಸವ ರಾಜ್ಯದಲ್ಲಿಯೇ ಮಾದರಿ ಉತ್ಸವವಾಗಿ ಆಚರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಅರುಣ ಎಚ್.ದೇಸಾಯಿ ತಿಳಿಸಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಮೂರು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಉತ್ಸವದಲ್ಲಿ ಕೃಷಿ ಮೇಳ ಆಹಾರ ಮೇಳ ಉದ್ಯೋಗ ಮೇಳ ಗ್ಯಾರಂಟಿ ಮೇಳ ಶ್ವಾನ ಪ್ರದರ್ಶನ ಕೈಗಾರಿಕಾ ಕರಕುಶಲ ಪ್ರಸ್ತಕ ಪ್ರದರ್ಶನ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.