ADVERTISEMENT

ರಾಯಚೂರು: 76 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ

254 ಕಾಮಗಾರಿಗಳಿಗೆ ₹6.17 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಕೆ

ನಾಗರಾಜ ಚಿನಗುಂಡಿ
Published 16 ಏಪ್ರಿಲ್ 2022, 19:31 IST
Last Updated 16 ಏಪ್ರಿಲ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಬೇಸಿಗೆ ತಾಪಮಾನ ಏರಿಕೆ ಆಗುತ್ತಿದ್ದು, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಆರಂಭವಾಗಲಿದೆ. ಪ್ರತಿವರ್ಷದಂತೆ ಈ ಸಲವೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಪಟ್ಟಿಸಿದ್ಧಪಡಿಸಿ, ಅನುದಾನಕ್ಕಾಗಿ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ.

ಏಳು ತಾಲ್ಲೂಕಿನ 76 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಲಿದ್ದು, ಇದನ್ನು ಪರಿಹರಿಸುವುದಕ್ಕಾಗಿ 37 ಕಡೆಗಳಲ್ಲಿ ಕೊಳವೆಬಾವಿ ಕೊರೆಯುವುದು ಹಾಗೂ 39 ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದಕ್ಕೆ ಗ್ರಾಮೀಣ ಕುಡಿಯುವ ನೀರು ಸೌಕರ್ಯ ಇಲಾಖೆಯ ಎಂಜಿನಿಯರುಗಳು ಯೋಜನೆ ಮಾಡಿಕೊಂಡಿದ್ದಾರೆ.

ಅಗತ್ಯಬಿದ್ದರೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ಗ್ರಾಮಗಳಿಗೆ ನೀರು ಪೂರೈಸುವುದಕ್ಕಾಗಿ ಯೋಜನೆ ಮಾಡಿದ್ದು, ಒಟ್ಟು 27 ಕೊಳವೆಬಾವಿಗಳನ್ನು ಈ ಉದ್ದೇಶಕ್ಕಾಗಿ ಗುರುತಿಸಲಾಗಿದೆ. ಅಲ್ಲದೆ, 39 ಕಡೆಗಳಲ್ಲಿ ಪ್ರತಿದಿನಕ್ಕೆ ಒಟ್ಟು 158 ಟ್ರಿಪ್‌ ನೀರು ಪೂರೈಸಬೇಕಾಗುತ್ತದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ನೀರು ಒದಗಿಸುವ ವ್ಯವಸ್ಥೆಗಾಗಿ ಒಟ್ಟು ₹6.17 ಕೋಟಿ ಅನುದಾನದ ಅಗತ್ಯವಿದೆ ಎಂದು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ವರದಿ ಸಲ್ಲಿಸಲಾಗಿದೆ.

ADVERTISEMENT

ಕೃಷ್ಣಾನದಿ, ತುಂಗಭದ್ರಾ ನದಿಗಳಿಂದ ಹಾಗೂ ಕಾಲುವೆ ಭಾಗದಿಂದ ದೂರ ಇರುವ ಮಾನ್ವಿ, ಲಿಂಗಸುಗೂರು ಮತ್ತು ಮಸ್ಕಿ ತಾಲ್ಲೂಕುಗಳ ಗ್ರಾಮಗಳಲ್ಲಿಯೇ ಅತಿಹೆಚ್ಚು ಕುಡಿಯುವ ನೀರಿನ ಸಮಸ್ಯೆ ಆಗಲಿದೆ. ಈ ತಾಲ್ಲೂಕುಗಳಲ್ಲಿ ಒಟ್ಟು ₹139.2 ಕೋಟಿ ಅನುದಾನ ಬೇಕಾಗುತ್ತದೆ. ಸಿಂಧನೂರು ತಾಲ್ಲೂಕಿಗೆ ₹1.31 ಕೋಟಿ ಹಾಗೂ ಲಿಂಗಸುಗೂರು ತಾಲ್ಲೂಕಿಗೆ ₹1 ಕೋಟಿ ಅನುದಾನ ಬೇಡಿಕೆ ಸಲ್ಲಿಸಲಾಗಿದೆ.

ಖಾಲಿಯಾಗುತ್ತಿವೆ ಕೆರೆ: ಗ್ರಾಮೀಣ ಭಾಗಗಳಲ್ಲಿ ಜನರು ಮತ್ತು ಜಾನುವಾರುಗಳಿಗೆ ಆಧಾರವಾಗಿರುವ ಕೆರೆಗಳು, ಬೇಸಿಗೆ ಹಿಸಿಲಿನಿಂದಾಗಿ ಖಾಲಿಯಾಗುತ್ತಿವೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 273 ಕೆರೆಗಳನ್ನು ಗುರುತಿಸಿದ್ದು, ಅವುಗಳ ಪೈಕಿ 24 ಕೆರೆಗಳಲ್ಲಿ ಶೇ 25 ರಷ್ಟು ರಷ್ಟು ಮಾತ್ರ ನೀರು ಇದೆ. 32 ಕೆರೆಗಳಲ್ಲಿ ಸುಮಾರು ಅರ್ಧದಷ್ಟು ನೀರು ಉಳಿದುಕೊಂಡಿದ್ದರೆ, 207 ಕೆರೆಗಳಲ್ಲಿ ಮುಕ್ಕಾಲು ಭಾಗ ಮಾತ್ರ ನೀರಿದೆ. ಶೇ 75 ರಷ್ಟು ಕರೆಗಳಲ್ಲಿ ಶೇ 3 ರಷ್ಟು ಮಾತ್ರ ನೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.