ದೇವದುರ್ಗ: ಅರಕೇರಾ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಗ್ರಾಮಗಳ 28 ವಾರ್ಡ್‌ಗಳ ಜನರಿಗೆ ಶುದ್ದ ಕುಡಿಯುವ ನೀರೊದಗಿಸಲು ₹4.3 ಕೋಟಿ ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೆತ್ತಿಕೊಂಡು 13 ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ!.
ಕೊತ್ತದೊಡ್ಡಿ ಗ್ರಾ.ಪಂ ವ್ಯಾಪ್ತಿಯ 9 ಗ್ರಾಮಗಳಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದೆ. ಬಳಕೆ ನೀರಿನ ಸಮಸ್ಯೆ ಇಲ್ಲ. ಆದರೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಗ್ರಾಮದ ಹೊರ ವಲಯದಲ್ಲಿರುವ ಕೆರೆ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಿದರೆ ಸಮಸ್ಯೆ ಪರಿಹಾರ ಆಗಲಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನನೆಗುದಿಗೆ ಬಿದ್ದು ಬಹುತೇಕ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗಿವೆ.
ಜಿಲ್ಲಾ ಪಂಚಾಯಿತಿ ತಾಲ್ಲೂಕಿನಲ್ಲಿ ದೊರಕುವ ಅಂತರ್ಜಲದಲ್ಲಿ ಆರ್ಸೆನಿಕ್, ಫ್ಲೋರೈಡ್‌ನಂಥ ವಿಷಕಾರಿ ರಾಸಾಯನಿಕ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಈ ಯೋಜನೆ ಆದ್ಯತೆ ಮೆರೆಗೆ ಮಂಜೂರು ಮಾಡಲಾಗಿತ್ತು. ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ ಕಾರಣ ಜನರಿಗೆ ಉಪಯೋಗಕ್ಕೆ ಬಾರದಂಥ ಸ್ಥಿತಿ ತಲುಪಿದೆ.
ಕೊತ್ತದೊಡ್ಡಿ, ಚಿಕ್ಕಲದೊಡ್ಡಿ, ಹೇಮನೂರು, ಹೊನ್ನ ಕಾಟಮಳ್ಳಿ, ಕಾಚಾಪುರ, ಕರಡೋಣ, ಮಲ್ಕಂದಿನ್ನಿ, ಮಲ್ಲಿನಾಯಕನದೊಡ್ಡಿ ಮತ್ತು ಯಲ್ಲದೊಡ್ಡಿ ಗ್ರಾಮಗಳಲ್ಲಿ ತಲಾ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. 10 ವರ್ಷಗಳಿಂದ ಬಳಕೆ ಇಲ್ಲದೇ ಎಲ್ಲಾ ಟ್ಯಾಂಕ್‌ಗಳು ಶಿಥಿಲಗೊಂಡಿವೆ.
ಗ್ರಾಮದ ಕೆರೆಯ ಬಳಿಯ ಶುದ್ಧೀಕರಣ ಘಟಕದ ಅವರಣದಲ್ಲಿ ಗಿಡ–ಗಂಟಿ ಬೆಳೆದು ಪಾಳು ಬಿದ್ದಿದೆ. ಯೋಜನೆಯಡಿ ನಿರ್ಮಿಸಿದ ನೀರು ಸಂಗ್ರಹ ಟ್ಯಾಂಕ್, ಶುದ್ಧೀಕರಣ ಘಟಕ, ನೀರು ಎತ್ತುವ ಯಂತ್ರಗಳು, ವಿದ್ಯುತ್ ಪರಿವರ್ತಕ ತುಕ್ಕು ಹಿಡಿದು ನಿಂತಿವೆ. ಕೆಲವು ಯಂತ್ರಗಳನ್ನು ಕಳವು ಮಾಡಲಾಗಿದೆ.
ಮಳೆಗಾಲದಲ್ಲಿ ಜನರು ನೀರಿಗಾಗಿ ಪರದಾಡುವಂಥ ಸ್ಥಿತಿ ಇದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ದೊಡ್ಡಿ ಸೇರಿ ಇತರ ಜನವಸತಿ ಪ್ರದೇಶಗಳು ಗುಡ್ಡದ ತೀರದಲ್ಲಿದ್ದು, ಅಲ್ಲಿನ ಜನ ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರಸ್ತುತ ಗ್ರಾಮ ಪಂಚಾಯಿತಿ ವತಿಯಿಂದ ಕೊಳವೆಬಾವಿ ಮೂಲಕ ನೇರವಾಗಿ ನಲ್ಲಿಗಳಿಗೆ ಸಂಪರ್ಕ ಕಲ್ಪಿಸಿರುವುದರಿಂದ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಜನರು ನೀರಿಗೆ ಪರದಾಡುತ್ತಾರೆ.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಪ್ರತಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ತಲಾ ₹15 ಲಕ್ಷ ವೆಚ್ಚದಲ್ಲಿ ಆರ್‌ಒ ಪ್ಲಾಂಟ್ ನಿರ್ಮಿಸಲಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಅವುಗಳೂ ಸ್ಥಗಿತಗೊಂಡಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳ ಸಭೆ ನಡೆಸಿ ನಿರ್ವಹಣೆ ಮತ್ತು ದುರಸ್ತಿಗೆ ಸೂಚಿಸುವೆಕರೆಮ್ಮ ಜಿ.ನಾಯಕ ಶಾಸಕಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿ ಪೂರ್ಣಗೊಳಿಸಿ ಬಳಕೆಯ ಸ್ಥಿತಿಯಲ್ಲಿ ಪಂಚಾಯಿತಿಗೆ ಹಸ್ತಾಂತರಿಸಿದರೆ ನಿರ್ವಹಣೆ ಮಾಡಲು ಪಂಚಾಯಿತಿಗೆ ಸೂಚಿಸುವೆ ಬಸವರಾಜ ಹಟ್ಟಿ ಇಒ
ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಘಟಕಗಳು ನಿರ್ವಹಣೆ ಅನುದಾನ ಕೊರತೆಯಿಂದ ಸ್ಥಗಿತವಾಗಿವೆ. ದುರಸ್ತಿ ಮತ್ತು ನಿರ್ವಹಣೆ ಬಗ್ಗೆ ಇಇ ಅವರ ಗಮನಕ್ಕೆ ತರುವೆಹೀರಾಲಾಲ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರ್ಮಾಣ ಹಂತದಲ್ಲಿ ಸ್ಥಗಿತವಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಪಂಚಾಯಿತಿಗೆ ವಹಿಸಿದ್ದಲ್ಲಿ ಪಂಚಾಯಿತಿ ವತಿಯಿಂದ ನಿರ್ವಹಣೆಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗುವುದುಮೋನಮ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.