ಮಾನ್ವಿ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಮಾಜಿ ಶಾಸಕ ಗಂಗಾಧರ ನಾಯಕ ನೇತೃತ್ವದಲ್ಲಿ ಬಿಜೆಪಿ ತಾಲ್ಲೂಕು ಪದಾಧಿಕಾರಿಗಳು ಬುಧವಾರ ರಾಯಚೂರಿನಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.
ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹ ಇದೆ. ತುಂಗಭದ್ರಾ ನದಿಯಿಂದ ಸಾಕಷ್ಟು ನೀರು ಕೆರೆಗೆ ಸರಬರಾಜು ಆಗುತ್ತಿದ್ದರೂ ಮಾನ್ವಿ ಪಟ್ಟಣಕ್ಕೆ 5ರಿಂದ 8 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕೆರೆಯ ನೀರನ್ನು ಶುದ್ಧೀಕರಿಸದೆ ನೇರವಾಗಿ ನಗರದ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಆರೋಪಿದರು.
ಶುದ್ಧೀಕರಣ ಘಟಕದ ಪಂಪ್‌ಹೌಸ್‌ನಲ್ಲಿರುವ ಜನರೇಟರ್ ಹಾಗೂ ಸ್ಟ್ಯಾಂಡ್ ಬೈ ಪಂಪ್ ಮೂರು ವರ್ಷಗಳಿಂದ ಕೆಟ್ಟು ಹೋಗಿದ್ದರೂ ದುರಸ್ತಿ ಮಾಡಿಸಿಲ್ಲ. ಶುದ್ಧೀಕರಣ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕ್ಲೋರಿನ್ ಇದ್ದರೂ ನೀರನ್ನು ಕ್ಲೋರಿನೇಷನ್ ಮಾಡದೆ ಸರಬರಾಜು ಮಾಡಲಾಗುತ್ತಿದೆ. ಪುರಸಭೆಯ ಆಡಳಿತ ಮತ್ತು ಅಧಿಕಾರಿಗಳು ಕುಡಿಯುವ ನೀರು ಪೂರೈಕೆ ಹೆಸರಿನಲ್ಲಿ ಪ್ರತಿವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂದು ಅವರು ದೂರಿದರು.
ಪಟ್ಟಣದಲ್ಲಿ ಅಧಿಕೃತವಾಗಿ 1,500 ನಳಗಳ ಸಂಪರ್ಕ ಇದ್ದು, ಅನಧಿಕೃತವಾಗಿ ಸುಮಾರು 10 ಸಾವಿರ ನಳಗಳ ಸಂಪರ್ಕವಿದೆ. ಇದರಿಂದ ಪುರಸಭೆಗೆ ಪ್ರತಿ ತಿಂಗಳು ₹12 ಲಕ್ಷ ರಾಜಸ್ವ ಸೋರಿಕೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಜೆ.ಸುಧಾಕರ, ಪದಾಧಿಕಾರಿಗಳಾದ ಜಗದೀಶ ಓತೂರು, ವಿಶ್ವನಾಥ ರಾಯಪ್ಪ, ಕುಮಾರಸ್ವಾಮಿ ಮೇದಾ, ಜಿ.ಉಮಾಪತಿ ನಾಯಕ, ಗೋಪಾಲ ಇಬ್ರಾಂಪುರ ಉಪಸ್ಥಿತರಿದ್ದರು.
ಮಾನ್ವಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುವಲ್ಲಿ ಹಾಲಿ ಸಚಿವ ಶಾಸಕರು ವಿಫಲರಾಗಿದ್ದಾರೆಗಂಗಾಧರ ನಾಯಕ ಮಾಜಿ ಶಾಸಕ ಮಾನ್ವಿ
ಮಾನ್ವಿ ಪಟ್ಟಣಕ್ಕೆ ಕನಿಷ್ಠ ಎರಡು ದಿನಗಳಿಗೊಮ್ಮ ಶುದ್ಧ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಪುರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕುಜೆ.ಸುಧಾಕರ ಬಿಜೆಪಿ ಮಂಡಲ ಅಧ್ಯಕ್ಷ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.