ಕವಿತಾಳ: ಸಮೀಪದ ಹಿರೇದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಹುಳುಗಳು ಬರುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕುಡಿಯುವ ನೀರಿನ ಕೆರೆಯಿಂದ ಗ್ರಾಮಕ್ಕೆ ಪೂರೈಸುವ ನೀರಿನಲ್ಲಿ ಹತ್ತು ದಿನಗಳಿಂದ ಹುಳು ಬರುತ್ತಿವೆ. ಬಳಕೆಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ಈ ನೀರನ್ನೇ ಬಳಸುತ್ತಿದ್ದು, ರೋಗ ಹರಡುವ ಭೀತಿ ಕಾಡುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.
ಉದ್ದನೆ ಆಕಾರದಲ್ಲಿ ಮಳೆ ಹುಳುಗಳಂತೆ ಕಾಣುವ ಈ ಹುಳುಗಳು ಕೆಂಪು ಬಣ್ಣದ್ದಾಗಿವೆ ಜರಡಿ ಹಿಡಿದು ನೀರು ಸಂಗ್ರಹಿಸುತ್ತಿದ್ದು ಹುಳು ಜರಡಿಯಲ್ಲಿ ಉಳಿಯುತ್ತವೆ. ಊರಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಇಲ್ಲದ ಕಾರಣ ಅನಿವಾರ್ಯವಾಗಿ ಈ ನೀರನ್ನೇ ಕುಡಿಯುವಂತಾಗಿದೆ ಎಂದು ಗ್ರಾಮದ ಕೆ.ನಿರುಪಾದಿ ಆರೋಪಿಸಿದರು.
‘ಕೆರೆಯಲ್ಲಿ ಹುಳು ಪತ್ತೆಯಾಗಿಲ್ಲ, ನೀರು ಸಂಗ್ರಹ ತೊಟ್ಟಿಯನ್ನು ಈಚೆಗೆ ಸ್ವಚ್ಚಗೊಳಿಸಲಾಗಿದೆ ಎನ್ನಲಾಗುತ್ತಿದೆ ಹೀಗಿದ್ದರೂ ನಲ್ಲಿಯಲ್ಲಿ ನಿತ್ಯ ಹುಳು ಬರುತ್ತಿವೆ. ಗ್ರಾಮದಲ್ಲಿಹಲವರಿಗೆ ಈಗಾಗಲೇ ನೆಗಡಿ, ಕೆಮ್ಮು, ಮೈ, ಕೈ ನೋವು , ಜ್ವರ ಕಾಣಿಸಿಕೊಂಡಿದ್ದು ಆತಂಕ ಉಂಟುಮಾಡಿದೆ. ಈ ಬಗ್ಗೆ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಗೋಸಿ ಈರಪ್ಪ, ಎಸ್. ಬಸವಲಿಂಗಪ್ಪ, ಎಂ. ಮಾಳಿಂಗರಾಯ, ಜೆ. ನಿರೂಪಾದಿ, ನಂದೀಶ, ಕೆ. ಸುರೇಶ, ಜಿ. ಬಸವರಾಜ, ಡಿ.ಜೆ.ಬಸವ ಮತ್ತು ಪ್ರಜ್ವಲ ಆಗ್ರಹಿಸಿದ್ದಾರೆ.
ನೀರು ಸಂಗ್ರಹ ತೊಟ್ಟಿಯನ್ನು ಈಚೆಗೆ ಸ್ವಚ್ಛಗೊಳಿಸಲಾಗಿದೆ ಕೆರೆಗೆ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಹೀಗಿದ್ದರೂ ನೀರಲ್ಲಿ ಹುಳು ಬರುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಪರಿಶೀಲಿಸಲಾಗುವುದು.ಲಕ್ಷ್ಮಣ ಪಿಡಿಒ ಹಿರೇದಿನ್ನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.