ರಾಯಚೂರು: ಇಲ್ಲಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿ ಆವರಣದಲ್ಲಿ ಲಾರಿ, ಕಾರು ಹಾಗೂ ದ್ವಿಚಕ್ರ ವಾಹನಗಳ ಚಾಲನಾ ಪರೀಕ್ಷೆ ನಡೆಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.
ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ನಡುವಿನ ಸಮಸ್ಯೆ ಇತ್ಯರ್ಥಗೊಳಿಸದ ಕಾರಣ ಹೊಸ ಹೈಟೆಕ್ ಚಾಲನಾ ಪರೀಕ್ಷಾ ಪಥ ಇದ್ದರೂ ಸಾರ್ವಜನಿಕರು ಆರು ವರ್ಷಗಳಿಂದ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಆರ್‌ಟಿಒ ಕಚೇರಿ ಆವರಣದಲ್ಲಿ ವಾಹನ ಚಾಲನಾ ಪರೀಕ್ಷೆ ನಡೆಸಲು ಸುಸಜ್ಜಿತವಾದ ವ್ಯವಸ್ಥೆ ಇಲ್ಲ. ಕಚೇರಿ ಮುಂದೆ ಎರಡು ಟೈರ್‌ಗಳನ್ನು ಇಟ್ಟು ಅದಕ್ಕೆ ಎರಡು ಅಥವಾ ನಾಲ್ಕು ಬಾರಿ ಇಂಗ್ಲಿಷ್ ಸಂಖ್ಯೆ 8 ಮಾದರಿಯಲ್ಲಿ ಸುತ್ತು ಹಾಕುವಂತೆ ಹೇಳುತ್ತಾರೆ. ಅಷ್ಟು ಪರೀಕ್ಷೆ ಕೊಡುವಷ್ಟರಲ್ಲಿ ಆವರಣದಲ್ಲಿ ದೂಳು ಮೇಲೆದ್ದಿರುತ್ತದೆ.
ಬೆಳಿಗ್ಗೆ 9 ಗಂಟೆಗೆ ಶುರುವಾಗುವ ಪರೀಕ್ಷೆ ಮಧ್ಯಾಹ್ನದ ವರೆಗೂ ನಡೆಯುತ್ತದೆ. ನಿತ್ಯ 50 ರಿಂದ 100 ಅರ್ಜಿಗಳು ಬರುತ್ತವೆ. ಎಲ್ಲರ ಪರೀಕ್ಷೆಗೆ ಮಾಡುವಷ್ಟರಲ್ಲಿ ಆವರಣ ಸಂಪೂರ್ಣ ದೂಳು ಆವರಿಸಿಕೊಂಡಿರುತ್ತದೆ.
ಜನರಿಗೆ ಇಲ್ಲಿ ಕುಳಿತುಕೊಳ್ಳಲು ಅಥವಾ ನಿಲ್ಲಲು ಸರಿಯಾದ ವ್ಯವಸ್ಥೆ ಇಲ್ಲ. ವಾಹನಗಳನ್ನು ನಿಲುಗಡೆ ಮಾಡುವ ಶೆಡ್‌ನಲ್ಲೇ ಸರತಿ ಸಾಲಿನಲ್ಲಿ ನಿಂತು ಪಾಳಿ ಬಂದಾಗ ಪರೀಕ್ಷೆ ಕೊಡುವುದು ಸಾಮಾನ್ಯವಾಗಿದೆ.
ಆರ್‌ಟಿಒ ಇನ್‌ಸ್ಪೆಕ್ಟರ್‌ಗಳ ಮೈದಾನದಲ್ಲಿ ಟೇಬಲ್ ಹಾಕಿಕೊಂಡು ದೊಡ್ಡ ಛತ್ರಿ ಹಿಡಿದುಕೊಂಡು ವಾಹನ ಚಾಲಕರ ಪರೀಕ್ಷೆ ನಡೆಸಬೇಕು. ಬೆಂಕಿ ಬಿಸಿಲು, ದೂಳು ಹಾಗೂ ಬೆವರಿನಿಂದ ಸಿಬ್ಬಂದಿಯೂ ಇಲ್ಲಿ ಇನ್ನಿಲ್ಲದ ಹಿಂಸೆ ಅನುಭವಿಸಬೇಕಾಗಿದೆ.
ರಾಯಚೂರಿನ ಸಿದ್ದರಾಮಪುರ ರಸ್ತೆಯಲ್ಲಿ ಹೈಟೆಕ್ ಚಾಲನಾ ಪರೀಕ್ಷಾ ಪಥ ನಿರ್ಮಾಣವಾಗಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸಾರಿಗೆ ಇಲಾಖೆಗೆ ಈವರೆಗೂ ಹಸ್ತಾಂತರವಾಗಿಲ್ಲ. ಇಲಾಖೆ ಜಾಗ ಬಿಟ್ಟು ಬೇರೆಯವರ 23 ಗುಂಟೆ ಜಾಗ ಅತಿಕ್ರಮಿಸಿ ನಿರ್ಮಾಣ ಮಾಡಿದ್ದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಗುತ್ತಿಗೆದಾರರು ಮಾಡಿದ ಸಮಸ್ಯೆಯಿಂದಾಗಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
‘ಜಿಲ್ಲಾ ಉಸ್ತುವಾರಿ ಸಚಿವರು, ಸಾರಿಗೆ ಸಚಿವರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಚಿವರು ಒಟ್ಟಿಗೆ ಸೇರಿಸಿ ಸಮಸ್ಯೆ ಬಗೆ ಹರಿಸಲು ಸಾಧ್ಯವಿದೆ. ಆದರೆ, ಸಚಿವರು ಹಾಗೂ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ನಮ್ಮಂಥವರ ತೊಂದರೆ ಅನುಭವಿಸಬೇಕಾಗಿದೆ’ ಎಂದು ವಾಹನ ಚಾಲನಾ ಪರೀಕ್ಷೆಗೆ ಬಂದಿದ್ದ ಹನುಮೇಶ ನಾಯಕ ಬೇಸರ ವ್ಯಕ್ತಪಡಿಸಿದರು.
‘ಸುಸಜ್ಜಿತವಾದ ಹೈಟೆಕ್ ಚಾಲನಾ ಪಥ ಇದ್ದರೂ ಕೆಲ ತಾಂತ್ರಿಕ ಸಮಸ್ಯೆಯಿಂದ ಅಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಮೊದಲಿನಿಂದಲೂ ಕಚೇರಿ ಆವರಣದಲ್ಲೇ ಪರೀಕ್ಷೆ ಮಾಡಿಕೊಂಡು ಬರಲಾಗಿದೆ. ನಾವು ಅದನ್ನೇ ಮುಂದುವರಿಸಿದ್ದೇವೆ’ ಎಂದು ಆರ್‌ಟಿಒ ಇನ್‌ಸ್ಪೆಕ್ಟರ್ ಪ್ರವೀಣ ಪ್ರತಿ್ಕ್ರಿಯಿಸಿದರು.
‘ತಾಂತ್ರಿಕ ಸಮಸ್ಯೆಯಿಂದಾಗಿ ಹೈಟೆಕ್ ಚಾಲನಾ ಪಥ ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಸ್ತಾಂತರವಾಗಿಲ್ಲ. ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಗೊಳ್ಳುವ ನಿರೀಕ್ಷೆ ಇದೆ’ ಎಂದು ರಾಯಚೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಿಲಿಂದಕುಮಾರ ಶ್ರೀಗಂಧಮೂರ್ತಿ ಹೇಳುತ್ತಾರೆ.
‘ಹೈಟೆಕ್ ಚಾಲನಾ ಪಥ ಇಲ್ಲದಿರುವುದಕ್ಕೇ ರಾಯಚೂರು ಜಿಲ್ಲೆಯ 1581 ಚಾಲಕರು ಪ್ರತಿ ಮೂರು ವರ್ಷಕ್ಕೊಮ್ಮೆ ಕಲಬುರಗಿಗೆ ಹೋಗಿ ಪರವಾನಗಿ ನವೀಕರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಬೇಕು‘ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಒತ್ತಾಯಿಸುತ್ತಾರೆ.
ಆರು ವರ್ಷಗಳಿಂದ ಪಾಳು ಬಿದ್ದಿರುವ ಹೈಟೆಕ್ ಚಾಲನಾ ಪಥ ಹೈಟೆಕ್ ಚಾಲನಾ ಪಥ ನಿರ್ಮಾಣಕ್ಕೆ ₹ 8 ಕೋಟಿ ಖರ್ಚು ತುಕ್ಕು ಹಿಡಿಯಲಾರಂಭಿಸಿವೆ ಆಧುನಿಕ ಉಪಕರಣಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.