
ರಾಯಚೂರು: ಜಿಲ್ಲೆಯಲ್ಲಿ ಗಾಂಜಾ ಮಾರಾಟ, ಸಾಗಣೆ ಮತ್ತು ಸೇವನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ತಡೆಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಜನವರಿಯಿಂದ ಫೆ.24ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡಿದವರ ವಿರುದ್ಧ ಪ್ರತ್ಯೇಕ 40 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯ ಬಳಗನೂರು, ಜಾಲಹಳ್ಳಿ, ನೇತಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ 2, ದೇವದುರ್ಗ 5, ಕವಿತಾಳ, ಲಿಂಗಸುಗೂರು, ಮಾರ್ಕೇಟ್ ಯಾರ್ಡ್, ರಾಯಚೂರು ಗ್ರಾಮೀಣ, ರಾಯಚೂರು ಪಶ್ಚಿಮ, ಹಾಗೂ ಯರಗೇರಾ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಸದರ ಬಜಾರ್ ಹಾಗೂ ಸಿಂಧನೂರು ಗ್ರಾಮೀಣ ಠಾಣೆಗಳಲ್ಲಿ ತಲಾ 4 ಹಾಗೂ ಸಿಂಧನೂರು ನಗರ ಠಾಣೆಯಲ್ಲಿ ಅತಿ ಹೆಚ್ಚು 15 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 40 ವಿವಿಧ ಪ್ರಕರಣಗಳು ದಾಖಲಾಗಿವೆ.
ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುದು ಆತಂಕ ಮೂಡಿಸಿದೆ. ಬಂಧನಕ್ಕೆ ಒಳಗಾದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಇರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹೊರ ರಾಜ್ಯಗಳಿಂದಲೂ ಯುವಕರು ನಗರಕ್ಕೆ ಬರುತ್ತಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ, ವಿವಿಧ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ರಾತ್ರಿ ಹೊತ್ತಿನಲ್ಲಿ ಹೊರಬಂದು ಗಾಂಜಾ, ಸಿಗರೇಟ್, ಸೇವನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೂ ಅಲ್ಲಿನ ವಿದ್ಯಾರ್ಥಿಗಳ ಮೂಲಗಳಿಂದ ಲಭ್ಯವಾಗಿದೆ.
ಪ್ರತಿ ದಿನ ಒಂದಲ್ಲೊಂದು ಕಡೆಗಳಲ್ಲಿ ಗಾಂಜಾ ಪ್ರಕರಣ ದಾಖಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಗಾಂಜಾ, ಅಫೀಮು ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಯುವಕರು ಕಾಲೇಜುಗಳಿಗೆ ಗೈರಾಗಿ ವಸತಿ ನಿಲಯದಲ್ಲಿ ಗಾಂಜಾ ಸೇವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಗರ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಅತಿ ಸುಲಭವಾಗಿ ಗಾಂಜಾ ಲಭ್ಯವಾಗುತ್ತಿದೆ. ಇದಕ್ಕೆ ಕಡಿವಾಣ ಬೀಳುತ್ತಿಲ್ಲ. ಗಾಂಜಾ ಸೇವನೆ, ಸಾಗಣೆ ತಡೆಗೆ ಪೊಲೀಸ್ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಹೆಚ್ಚುತ್ತಿದೆ ಗಾಂಜಾ ಮಾರುಕಟ್ಟೆ
ಗಾಂಜಾ ಕೊಂಡುಕೊಳ್ಳುವಿಕೆ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಪದವಿ ಕಾಲೇಜುಗಳಲ್ಲೂ ಇದರ ಬಳಕೆ ಹೆಚ್ಚಾಗಿದೆ. ಸ್ನಾತಕೋತ್ತರ ಪದವಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲೂ ಹಾವಳಿ ಹೆಚ್ಚಾಗಿದೆ.
ರಾಯಚೂರು ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳ ಶ್ರೀಮಂತ ಕುಟುಂಬದ ಮಕ್ಕಳು ಕಾರುಗಳಲ್ಲಿ ಬಂಧುಬಳಗ ಮತ್ತು ಸ್ನೇಹಿತರಂತೆ ಹಗಲಿನಲ್ಲೇ ಹಳ್ಳಿಗಳಿಗೆ ಬಂದು ಚೌಕಾಸಿ ಮಾಡಿ ಗಾಂಜಾ ಖರೀದಿಸಿಕೊಂಡು ಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಂಜಾ ಮತ್ತಿಗೆ ವ್ಯಸನಿಗಳಾದ ಯುವಕರು ಅಪಾರ ಹಣ ವ್ಯಯ ಮಾಡುತ್ತಿದ್ದಾರೆ. ಮನೆಯಲ್ಲಿ ಅಪ್ಪನ ಜೇಬಿನಲ್ಲಿ ಅಮ್ಮ ಕೂಡಿಟ್ಟಿದ್ದನ್ನು ಕದ್ದಾದರೂ ಸರಿ ಗಾಂಜಾ ಸೇದುತ್ತಾರೆ. ಕಡೆಗೆ ಅದಕ್ಕೂ ಕಡಿವಾಣ ಬಿದ್ದಾಗ ಕಳ್ಳತನ ಮತ್ತು ಸಮಾಜವಿದ್ರೋಹಿ ಕೃತ್ಯಕ್ಕೆ ಇಳಿಯುತ್ತಾರೆ.
2026ರಲ್ಲಿ ನಗರ ಸೇರಿ ತಾಲ್ಲೂಕಿನ ನಡೆದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಯುವಕರು ಮಾದಕ ವ್ಯಸನಿಗಳಾಗಿದ್ದನ್ನು ಪೊಲೀಸರು ಗುರುತಿಸಿದ್ದರು. ಗಾಂಜಾ ಅಮಲಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟವನ್ನು ಸಂಪೂರ್ಣ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲೂ ಗಾಂಜಾ ಸೇವನೆ ಮಾರಾಟ ಪ್ರಕರಣಗಳು ಕಂಡುಬಂದಲ್ಲಿ ವಿಡಿಯೊ ಚಿತ್ರೀಕರಿಸಿ ಅಥವಾ ಫೋಟೊ 9480803800 ಸಂಖ್ಯೆಗೆ ವಾಟ್ಸ್‌ಆ್ಯಪ್ ಮಾಡಬಹುದು ಅಥವಾ ಪೊಲೀಸ್ ತುರ್ತು ಸಹಾಯವಾಣಿ 112ಗೆ ಮಾಹಿತಿ ನೀಡಬಹುದು.– ಅರುಣಾಂಕ್ಷು ಗಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಯಚೂರು
ಕೇವಲ ಎರಡು ತಿಂಗಳಲ್ಲಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳ ಸೇವನೆಯಿಂದ ಜಿಲ್ಲೆಯಲ್ಲಿ 40 ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯ ಜನರಲ್ಲಿ ತೀವ್ರವಾದ ಆತಂಕವನ್ನು ಉಂಟು ಮಾಡುತ್ತದೆ. ಇದರಿಂದ ಕೊಲೆ ಸುಲಿಗೆ ಅತ್ಯಾಚಾರ ಸೇರಿದಂತೆ ಇನ್ನಿತರ ಸಾಮಾಜಿಕ ಕುಕೃತ್ಯಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.– ಚನ್ನಬಸವ ಜಾನೇಕಲ್, ಜಿಲ್ಲಾ ಅಧ್ಯಕ್ಷ ಎಐಡಿವೈಒ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.