ADVERTISEMENT

ಎನ್ಆರ್ ಸಿ, ಸಿಎಎ, ಎನ್ ಪಿಆರ್ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 13:46 IST
Last Updated 17 ಜನವರಿ 2020, 13:46 IST
ರಾಯಚೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಎನ್ಆರ್ ಸಿ, ಸಿಎಎ, ಎನ್ ಪಿಆರ್ ಕಾಯ್ದೆಗಳು ರದ್ದುಗೊಳಿಸುವಂತೆ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಎನ್ಆರ್ ಸಿ, ಸಿಎಎ, ಎನ್ ಪಿಆರ್ ಕಾಯ್ದೆಗಳು ರದ್ದುಗೊಳಿಸುವಂತೆ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಎನ್ಆರ್‌ಸಿ, ಸಿಎಎ, ಎನ್‌ಪಿಆರ್ ಕಾಯ್ದೆಗಳನ್ನು ಜಾರಿಗೆ ತಂದಿರುವುದರಿಂದ ಸಂವಿಧಾನದ ಮೂಲ ತತ್ವಗಳು ನಾಶಹೊಂದುತ್ತವೆ. ಕೇಂದ್ರ ಸರ್ಕಾರಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂವಿಧಾನದ ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಸಂವಿಧಾನದ 14ನೇ ವಿಧಿಯಂತೆ ಭಾರತದಲ್ಲಿ 11 ವರ್ಷ ಮೇಲ್ಪಟ್ಟು ವಾಸಿಸುತ್ತಿರುವ ಜನರೆಲ್ಲರಿಗೂ ಪೌರತ್ವ ದೊರೆಯುತ್ತದೆ. ಹೀಗಿರುವಾಗ ಬೇರೆ ಬೇರೆ ದೇಶದ ನಾಗರಿಕರಿಗೆ ಒತ್ತಾಯಪೂರ್ವಕವಾಗಿ ಕರೆಸಿಕೊಂಡು ಪೌರತ್ವವನ್ನು ನೀಡುವುದು ಹಾಗೂ ಹಲವು ವರ್ಷಗಳಿಂದ ವಾಸಿಸುತ್ತಿರುವ ಮೂಲ ನಿವಾಸಿಗರಿಗೆ ದಾಖಲೆ ಕೇಳುವುದು ಹುಚ್ಚುತನದ ಪರಮಾವಧಿಯಾಗಿದೆ. ಮೋದಿ, ಅಮಿತ್ ಶಾ ತುಘಲಕ್ ದರ್ಬಾರ್ ನಡೆಸಿ, ದೇಶ ನಾಶ ಮಾಡುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ದೇಶದ ಜ್ವಲಂತ ಸಮಸ್ಯೆಗಳಾದ ಅನಕ್ಷರತೆ, ನಿರುದ್ಯೋಗ, ಅಪೌಷ್ಟಿಕತೆ, ಅಸ್ಪೃಶ್ಯತೆ, ಅಜ್ಞಾನ, ಬೆಲೆ ಏರಿಕೆ, ಜಿಡಿಪಿ ಮೌಲ್ಯ ಕುಸಿತ, ಜಾತಿ, ಧರ್ಮ ತಾರತಮ್ಯ, ಭಯೋತ್ಪಾದನೆ ಮುಂತಾದ ಅನಿಷ್ಠಗಳಿಂದ ರಕ್ಷಿಸಬೇಕಾದ ಬಿಜೆಪಿ ಸರ್ಕಾರ ಅವೈಜ್ಞಾನಿಕ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ದೂರಿದರು.

ADVERTISEMENT

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅಯ್ಯಪ್ಪ, ಸಂಚಾಲಕ ರಾಜುಪಟ್ಟಿ, ಶಬನಾ, ಯಂಕಪ್ಪ, ಮೌನೇಶ್ ಬಾಗಲವಾಡ, ಮಹೆಬೂಬ್, ರೇಹಾನ್, ರವೀಂದರ್, ಅಮೀನಾ ಬೇಗಂ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.