ADVERTISEMENT

ಸಿಂಧನೂರು | ಬರಿದಾದ ಕೆರೆ ಒಡಲು: ದಾಹ ತಣಿಸಲು ಪರದಾಟ

ಕಲುಷಿತ ನೀರು ಸೇವನೆಯಿಂದ ರೋಗ ಭೀತಿ: ವಿವಿಧ ಗ್ರಾಮಗಳಲ್ಲಿ ಉಲ್ಬಣಿಸಿದ ಸಮಸ್ಯೆ

ಡಿ.ಎಚ್.ಕಂಬಳಿ
Published 29 ಫೆಬ್ರುವರಿ 2024, 5:07 IST
Last Updated 29 ಫೆಬ್ರುವರಿ 2024, 5:07 IST
ಸಿಂಧನೂರು ತಾಲ್ಲೂಕಿನ ಗಡಿ ಗ್ರಾಮ ಹಸಮಕಲ್‍ನ ಕುಡಿಯುವ ನೀರಿನ ಕೆರೆ ಬರಿದಾಗಿರುವುದು
ಸಿಂಧನೂರು ತಾಲ್ಲೂಕಿನ ಗಡಿ ಗ್ರಾಮ ಹಸಮಕಲ್‍ನ ಕುಡಿಯುವ ನೀರಿನ ಕೆರೆ ಬರಿದಾಗಿರುವುದು   

ಸಿಂಧನೂರು: ಬರಗಾಲದಿಂದಾಗಿ ತಾಲ್ಲೂಕಿನ ಕುಡಿಯುವ ನೀರಿನ ಕೆರೆಗಳು ಅವಧಿಗೆ ಮುನ್ನವೇ ಖಾಲಿಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.

ಅಗತ್ಯ ಪ್ರಮಾಣದ ಮಳೆಯಾಗದ ಕಾರಣ ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಡಿಸೆಂಬರ್ ಕೊನೆಯ ವಾರದಲ್ಲೇ ತುಂಗಭದ್ರಾ ಮುಖ್ಯ ಕಾಲುವೆ ಸೇರಿ ಉಪ ಕಾಲುವೆಗಳಿಗೆ ನೀರಿನ ಹರಿವು ಸ್ಥಗಿತಗೊಳಿಸಲಾಗಿತ್ತು. ಆ ವೇಳೆಗೆ ಕೆರೆಗಳಲ್ಲಿ ನೀರು ಸಂಗ್ರಹಿಸಿಕೊಂಡಿದ್ದರೂ ತೀವ್ರ ಬರಗಾಲದ ಕಾರಣ ಅವಧಿಗೆ ಮುನ್ನವೇ ಖಾಲಿಯಾಗಿದೆ. ಜನ-ಜಾನುವಾರು ತತ್ವಾರ ಎದುರಿಸುವಂತಾಗಿದೆ.

ತಾಲ್ಲೂಕಿನ ಬಾದರ್ಲಿ, ಗೊರೇಬಾಳ, ಗುಂಜಳ್ಳಿ, ಹೆಡಗಿನಾಳ, ಹುಡಾ, ಜಾಲಿಹಾಳ, ಜವಳಗೇರಾ, ಕುನಟಗಿ, ಸಾಲಗುಂದಾ, ಸಿಂಧನೂರು, ತುರ್ವಿಹಾಳ ಹಾಗೂ ವಲ್ಕಂದಿನ್ನಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಬಾದರ್ಲಿ, ಹೆಡಗಿನಾಳ, ಸಾಲಗುಂದಾ ಹೋಬಳಿಗಳ ವ್ಯಾಪ್ತಿಯ ಹಲವು ಗ್ರಾಮಗಳು ನದಿ ಪಕ್ಕದಲ್ಲಿದ್ದರೂ ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ ಈ ಬಾರಿ ನೀರಿನ ಸಮಸ್ಯೆಗೆ ಸಿಲುಕಿವೆ.

ADVERTISEMENT

ತಾಲ್ಲೂಕಿನ ಗಡಿ ಗ್ರಾಮ ಹಸಮಕಲ್ ಕುಡಿಯುವ ನೀರಿನ ಕೆರೆ ಬರಿದಾಗಿದ್ದು, ಗುಡದೂರು, ರಂಗಾಪುರ, ಪಾಂಡುರಂಗ ಕ್ಯಾಂಪ್, ಮುದ್ದಾಪುರ ಹಾಗೂ ಮಲ್ಲಿಕಾರ್ಜುನ ಕ್ಯಾಂಪ್‍ಗಳಿಗೆ ನೀರು ಸರಬರಾಜು  ಕಳೆದ ಹದಿನೈದು ದಿನಗಳ ಹಿಂದೆಯೇ ಸ್ಥಗಿತಗೊಂಡಿದೆ. ಖಾಸಗಿ ಘಟಕಗಳಿಂದ ಜನರು ಕುಡಿಯುವ ನೀರು ತರುತ್ತಿದ್ದು, ಜಾನುವಾರುಗಳ ದಾಹ ತಣಿಸಲು ಪರದಾಡುವಂತಾಗಿದೆ. ತಾಲ್ಲೂಕಿನ ಹಲವು ಕ್ಯಾಂಪ್ ಹಾಗೂ ಗ್ರಾಮಗಳಲ್ಲಿ ಹೈನುಗಾರಿಕೆ ರೈತರ ಉಪ ಕಸುಬಾಗಿದ್ದು, ನೀರಿನ ಕೊರತೆ ಹಾಗೂ ಮೇವಿನ ಅಭಾವದಿಂದಾಗಿ ಹೈನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಜಾನುವಾರು, ಪ್ರಾಣಿ–ಪಕ್ಷಿಗಳಿಗೆ ನೀರಿನ ಅಭಾವ ಹೈನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಕುಸಿದ ಅಂತರ್ಜಲ, ತಾಲೂಕಾಡಳಿತಕ್ಕೆ ಸವಾಲು
ಈಗಾಗಲೇ ಎಲ್ಲ ಗ್ರಾ.ಪಂ ಪಿಡಿಒ ಅಧ್ಯಕ್ಷರುಗಳ ಸಭೆ ನಡೆಸಿ ಕೆರೆಗಳಲ್ಲಿರುವ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆಯಲಾಗಿದೆ. ಮಾ.5 ರಿಂದ 12 ರವರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸಲಾಗುತ್ತಿದ್ದು ಆಗ ಎಲ್ಲ ಕೆರೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ
ಹಂಪನಗೌಡ ಬಾದರ್ಲಿ ಶಾಸಕ ಸಿಂಧನೂರು
ವಾಂತಿ-ಭೇದಿ ಪ್ರಕರಣ ಸಂಭವ ಸಾಧ್ಯತೆ?
ಕೆರೆ ಬತ್ತಿ ಪರ್ಯಾಯ ನೀರಿನ ಮೂಲಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಅಲ್ಲಲ್ಲಿ ಫ್ಲೋರೈಡ್ ಲವಣಾಂಶವುಳ್ಳ ನೀರು ಕುಡಿಯುತ್ತಿದ್ದು ವಾಂತಿ–ಭೇದಿ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೀಡಾಗುತ್ತಿರುವ ವರದಿಗಳಿವೆ. ಕೆಲ ಗ್ರಾಮಗಳಲ್ಲಿ ಬೇರೆ ದಾರಿಯಿಲ್ಲದೇ ಜನರು ಹಳ್ಳದ ವರತೆ ನೀರಿಗೆ ಮೊರೆ ಹೋಗಿದ್ದಾರೆ. ಯಾವುದೇ ರೀತಿಯ ಅನಾಹುತಗಳು ಸಂಭವಿಸುವ ಮುಂಚೆ ತಾಲ್ಲೂಕಾಡಳಿತ ಎಚ್ಚೆತ್ತುಕೊಂಡು ಪರ್ಯಾಯ ಮೂಲಗಳಿಂದ ನೀರಿನ ಸೌಕರ್ಯ ಕಲ್ಪಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.