ರಾಯಚೂರಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿದರು. ತಹಶೀಲ್ದಾರ್ ಸುರೇಶ ವರ್ಮಾ ಹಾಗೂ ಮಹಾನಗರಪಾಲಿಕೆ ಉಪ ಆಯುಕ್ತೆ ಸಂತೋಷರಾಣಿ ಉಪಸ್ಥಿತರಿದ್ದರು
ರಾಯಚೂರು: ‘ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರುವ ದಿಸೆಯಲ್ಲಿ ಮುಖ್ಯ ಶಿಕ್ಷಕರು ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳಬೇಕು’ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಸಲಹೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ 40ಕ್ಕಿಂತ ಕಡಿಮೆ ಸಾಧನೆ ಮಾಡಿದ 62 ಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಶಾಲೆಯಿಂದ ಹೊರಗುಳಿದವರ ವರದಿ ಮತ್ತು ಪ್ರತಿ ಶಾಲೆಯಲ್ಲಿನ ಮೂಲ ಸೌಲಭ್ಯಗಳು ಮತ್ತು ಅಸ್ತಿತ್ವದಲ್ಲಿರುವ ನ್ಯೂನತೆಗಳ ಪಟ್ಟಿ ಮಾಡಬೇಕು. ಅದನ್ನು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕು’ ಎಂದು ಹೇಳಿದರು.
‘ಎರಡು ವಾರಗಳ ನಂತರ ನಿಗದಿಪಡಿಸಲಾಗುವ ಮುಂದಿನ ಸಭೆಗೆ ಅಗತ್ಯವಿರುವ ಎಲ್ಲ ಮಾಹಿತಿಯೊಂದಿಗೆ ಮುಖ್ಯೋಪಾಧ್ಯಾಯರು ಸಭೆಗೆ ಹಾಜರಾಗಬೇಕು’ ಎಂದು ಸೂಚಿಸಿದರು.
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ಜಿಲ್ಲಾಧಿಕಾರಿ ಅವರು ಈ ಹಿಂದೆ ವಿವಿಧ ಸಮಿತಿಗಳನ್ನು ರಚಿಸಿದ್ದರು. ನಗರಕ್ಕೆ ಮಹಾನಗರಪಾಲಿಕೆ ಆಯುಕ್ತರ ನೇತೃತ್ವದಲ್ಲಿಐವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ’ ಎಂದು ತಿಳಿಸಿದರು.
‘ಕಳಪೆ ಸಾಧನೆ ತೋರಿರುವ ಶಾಲೆಗಳಿಗೆ ನಗರ ಮಟ್ಟದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಇದೇ ರೀತಿಯ ಉಪ ಸಮಿತಿಗಳನ್ನು ರಚಿಸಲಾಗುವುದು’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಕೇವಲ ಅಂಕಗಣಿತದ ಸಂಖ್ಯೆಯಲ್ಲ; ಇದು ಭವಿಷ್ಯದ ಕೌಶಲಪೂರ್ಣ, ಬೌದ್ಧಿಕವಾಗಿ ಪ್ರತಿಭಾನ್ವಿತ ಮತ್ತು ಸಮರ್ಥ ಮಾನವ ಸಂಪನ್ಮೂಲಗಳ ಅಸ್ತಿತ್ವಕ್ಕೆ ಅಡಿಪಾಯವಾಗಿದೆ. ಉತ್ತಮ ಶಿಕ್ಷಣವು ರಾಷ್ಟ್ರ ಮತ್ತು ನಗರಕ್ಕೆ ಬಲವಾದ ಮಾನವ ಬಂಡವಾಳವನ್ನು ನಿರ್ಮಿಸಲು ಅಡಿಪಾಯವಾಗಿದೆ’ ಎಂದರು.
‘ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿಯ ಮೇಲೆ ನಿಗಾ ಇಡಬೇಕು. ಕಲಿಕೆ ಮಟ್ಟವನ್ಕು ಗ್ರಹಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಈ ಕ್ರಮವು ಜಿಲ್ಲೆಯ ಶೈಕ್ಷಣಿಕ ನೆಲೆಯನ್ನು ಬಲಪಡಿಸುವ ಮತ್ತು ವಿದ್ಯಾರ್ಥಿಗಳ ಜೀವನಕ್ಕೆ ಹೊಸ ದಿಕ್ಕನ್ನು ನೀಡುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.
ತಹಶೀಲ್ದಾರ್ ಸುರೇಶ ವರ್ಮಾ ಹಾಗೂ ಮಹಾನಗರಪಾಲಿಕೆ ಉಪ ಆಯುಕ್ತೆ ಸಂತೋಷರಾಣಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶೇ40ಕ್ಕಿಂತ ಕಡಿಮೆ ಸಾಧನೆ ಮಾಡಿದ ಮುಖ್ಯ ಶಿಕ್ಷಕರೊಂದಿಗೆ ಸಭೆ
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಅಂಕಗಣಿತದ ಸಂಖ್ಯೆಯಲ್ಲ
ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿಯ ಮೇಲೆ ನಿಗಾ ಇಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.