ADVERTISEMENT

ಎಕರೆಗೆ 25 ಕ್ವಿಂಟಲ್ ಜೋಳ ಖರೀದಿಸಿ: ರಾಜ್ಯ ರೈತ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:39 IST
Last Updated 21 ಫೆಬ್ರುವರಿ 2026, 5:39 IST
ಜೋಳ ಖರೀದಿ ಕೇಂದ್ರದಲ್ಲಿ  ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು
ಜೋಳ ಖರೀದಿ ಕೇಂದ್ರದಲ್ಲಿ  ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್ ಜೋಳ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು    

ರಾಯಚೂರು: ಜೋಳ ಖರೀದಿ ಕೇಂದ್ರದಲ್ಲಿ ಸರ್ಕಾರ ಪ್ರತಿ ಎಕರೆಗೆ 25 ಕ್ವಿಂಟಲ್ ತೆಗೆದುಕೊಳ್ಳಬೇಕು. ಜಾನೇಕಲ್ ಸೊಸೈಟಿಯಲ್ಲಿ ಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈಗಾಗಲೇ ರೈತರು ಜಿಲ್ಲೆಯಾದ್ಯಂತ ಜೋಳ ಕಟಾವು ಮಾಡುತ್ತಿದ್ದಾರೆ. ಆದರೆ, ಸರ್ಕಾರ ಜೋಳ ಖರೀದಿ ಕೇಂದ್ರ ತೆಗೆಯಲು ಮೀನಮೇಷ ಎಣಿಸುತ್ತಿದೆ. ರೈತರ ಹಿತ ದೃಷ್ಟಿಯಿಂದ ಕೂಡಲೇ ಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ಎಕರೆಗೆ 15 ಕ್ವಿಂಟಲ್‌ದಿಂದ 25 ಕ್ವಿಂಟಲ್‌ಗೆ ಹೆಚ್ಚಿಸಬೇಕು. ಗರಿಷ್ಠ 200 ಕ್ವಿಂಟಲ್‌ವರೆಗೆ  ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮಾನ್ವಿ ತಾಲ್ಲೂಕಿನ ಜಾನೇಕಲ್ ಗ್ರಾಮದ ಸೊಸೈಟಿಯ ಜೋಳದ ನೋಂದಣಿ ಮತ್ತು ಖರೀದಿಸುವ ಸ್ಥಳವನ್ನು ಅಮರಾವತಿ ಕ್ಯಾಂಪ್‌ನಲ್ಲಿ ಮಾಡಲಾಗಿದೆ. ಇದು ಸುಮಾರು 5 ಕಿ.ಮೀ ಅಂತರದಲ್ಲಿರುತ್ತದೆ. ಇದರಿಂದಾಗಿ ರೈತರು ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಕ್ಷಣವೇ ಮೊದಲಿನಂತೆ ಜಾನೇಕಲ್ ಗ್ರಾಮದಲ್ಲಿಯೇ ನೊಂದಣಿ ಮತ್ತು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಮಾನ್ವಿ ಮತ್ತು ಸಿರವಾರ ತಾಲ್ಲೂಕಿನಲ್ಲಿ ಭತ್ತ, ಹತ್ತಿ, ಮತ್ತು ಖಾಲಿ ಇರುವ ಜಮೀನುಗಳಲ್ಲಿ ಜೋಳದ ಹೊಲವೆಂದು ಸುಳ್ಳು ರೀತಿಯ ಜಿ.ಪಿ.ಎಸ್ ಮಾಡಿರುತ್ತಾರೆ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಕಾರ್ಯದರ್ಶಿ ಸುಗೂರಯ್ಯ ಆರ್.ಎಸ್.ಮಠ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ, ದೇವರಾಜ ನಾಯಕ, ಕಲ್ಯಾಣ ಮೇಟಿ, ನರಸಿಂಹಲು, ಬಸವರಾಜ, ಹೊನ್ನಪ್ಪ, ಚನ್ನಬಸವ, ಹನುಮಂತಪ್ಪ, ಶರಣಪ್ಪ ಪಾಲ್ಗೊಂಡಿದ್ದರು.

ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ

ಮಾನ್ವಿ: ‘ತಾಲ್ಲೂಕಿನಲ್ಲಿ ಒಂದು ವಾರದ ಒಳಗೆ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳ ಖರೀದಿ ಕೇಂದ್ರ ಆರಂಭಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡ ದುರುಗಪ್ಪ ತಡಕಲ್ ಒತ್ತಾಯಿಸಿದರು. ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈಗಾಗಲೇ ಮುಂಗಾರು ಮತ್ತು ಹಿಂಗಾರು ಜೋಳ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಆದಷ್ಟು ಬೇಗ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು.

ಜೋಳವನ್ನು ಖರೀದಿ ಮಾಡುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ವಿಳಂಬ ಮಾಡಿದರೆ ನುಸಿ ಬರುವುದು ಮತ್ತಿತರ ಕಾರಣಗಳಿಂದ ಹಾನಿ ಉಂಟಾದರೆ ಸರ್ಕಾರವೇ ಹೊಣೆಯಾಗುತ್ತದೆ’ ಎಂದರು. ಜೋಳ ಸಾಗಿಸಲು ಸಾರಿಗೆ ಪರವಾನಗಿ ಮತ್ತು ಖಾಲಿ ಚೀಲ ಟೆಂಡರ್‌ ಪ್ರಕ್ರಿಯೆಗಳನ್ನು ಆದಷ್ಟು ಬೇಗನೆ ಅಂತಿಮಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ‘ಕುರ್ಡಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದಿರುವ ಹತ್ತಿ ಮತ್ತು ತೊಗರಿ ಬೆಳೆಯನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಬೇಕು’ ಎಂದು ಒತ್ತಾಯಿಸಿದರು. ಮುಖಂಡರಾದ ಹನುಮೇಶ ನಾಯಕ ಜೀನೂರು ಶಿವಕುಮಾರ ತಡಕಲ್ ಮಹಾದೇವ ಯಾದವ್ ತಡಕಲ್ ಅಜಿತ್ ಕುಮಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.