ADVERTISEMENT

ಕೃಷಿ, ಪಶು ಪಾಲನೆ ಅಭಿವೃದ್ಧಿಗೆ ಒತ್ತುಕೊಡಿ: ಸಿ. ಎಚ್. ಶ್ರೀನಿವಾಸ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:34 IST
Last Updated 30 ಡಿಸೆಂಬರ್ 2025, 8:34 IST
 ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಸೋಮವಾರ ಆರಂಭವಾದ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ. ಎಚ್. ಶ್ರೀನಿವಾಸ ಉದ್ಠಾಟಿಸಿದರು. ಕುಲಪತಿ ಹನುಮಂತಪ್ಪ, ಪಿ. ಕಮರ್-ಉದ್-ದಿನ್, ಷೆ ಜಾಗೃತಿ ದೇಶಮಾನ್ಯ ಉಪಸ್ಥಿತರಿದ್ದರು
 ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಸೋಮವಾರ ಆರಂಭವಾದ ಅಂತರ ರಾಷ್ಟ್ರೀಯ ಸಮ್ಮೇಳನವನ್ನು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ. ಎಚ್. ಶ್ರೀನಿವಾಸ ಉದ್ಠಾಟಿಸಿದರು. ಕುಲಪತಿ ಹನುಮಂತಪ್ಪ, ಪಿ. ಕಮರ್-ಉದ್-ದಿನ್, ಷೆ ಜಾಗೃತಿ ದೇಶಮಾನ್ಯ ಉಪಸ್ಥಿತರಿದ್ದರು   

ರಾಯಚೂರು: ‘ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳು ಕೃಷಿ ಹಾಗೂ ಪಶು ಪಾಲನೆ ಕ್ಷೇತ್ರಗಳ ಅಭಿವೃದ್ಧಿಗೆ ಹಿಂದಿಗಿಂತಲೂ ಹೆಚ್ಚು ಒತ್ತು ಕೊಡಬೇಕು’ ಎಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ. ಎಚ್. ಶ್ರೀನಿವಾಸ ಸಲಹೆ ನೀಡಿದರು

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಬಾರಾಮುಲ್ಲಾದ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಸಹಕಾರಿ ನಿಯಮಿತದ ಸಹಯೋಗದಲ್ಲಿ ‘ಕೃಷಿ, ಪಶು ವೈದ್ಯಕೀಯ ಮತ್ತು ಕೃಷಿಗೆ ಸಂಬಂಧಿಸಿದ ವಿಷಯಗಳಲ್ಲಿ ಸುಸ್ಥಿರ ನಾವೀನ್ಯತೆಗಳು’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘2047ರ ವೇಳೆಗೆ ತರಕಾರಿ, ಹಾಲು ಹಾಗೂ ಪೌಷ್ಟಿಕ ಆಹಾರದ ಬೇಡಿಕೆ ಅಧಿಕ ಇರುವ ಕಾರಣ ಉತ್ಪಾದನಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ. ಪ್ರಸ್ತುತ ದೇಶದಲ್ಲಿ ಶೇಕಡ 47ರಷ್ಟು ಭಾಗದಲ್ಲಿ ಮಾತ್ರ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ಸಹ ಹೆಚ್ಚಿಸಿಕೊಳ್ಳಬೇಕಾಗಲಿದೆ’ ಎಂದು ತಿಳಿಸಿದರು.

‘ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಒಣಭೂಮಿ ಇರುವ ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ರಾಯಚೂರಲ್ಲಿ ಹತ್ತಿ ಉತ್ಪಾದನೆ ಅಧಿಕವಿದ್ದರೂ ಸಾಗಣೆಯಲ್ಲಿ ಸಮಸ್ಯೆ ಇದೆ. ರಾಯಚೂರಿನ ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್‌ ಹಾಳೆಗಳೂ ಹಾರಾಡುತ್ತಿವೆ. ಇಂತಹ ಸಣ್ಣಪುಟ್ಟ ವಿಷಯಗಳ ಕಡೆಗೂ ವಿಶ್ವವಿದ್ಯಾಲಯ ಗಮನ ಹರಿಸಬೇಕಿದೆ’ ಎಂದು ಸಲಹೆ ನೀಡಿದರು.

‘2002ರಲ್ಲಿ ಉತ್ತಮವಾಗಿ ಬೆಳೆದು ಭರವಸೆ ಮೂಡಿಸಿದ ಬಿಟಿ ಹತ್ತಿ ತಳಿಯು ಕ್ರಮೇಣ ಕೀಟಬಾಧೆಗೆ ತುತ್ತಾಗಿದ್ದು, ನಾವೀನ್ಯತೆಯ ಮೂಲಕ ಹೊಸ ತಳಿಯ ಸಂಶೋಧನೆ ನಡೆಸಬೇಕಿದೆ. ಹತ್ತಿ ಬಿಡಿಸುವಿಕೆಯ ಸಣ್ಣ ಉಪಕರಣಗಳ ತಯಾರಿಕೆ ಹಾಗೂ ಉತ್ತಮ ರೀತಿಯ ಸಾಗಣೆಗೂ ವ್ಯವಸ್ಥೆ ರೂಪಿಸಬೇಕಿದೆ’ ಎಂದರು.

‘ಮುಂಗಾರು ಮತ್ತು ಮಾರುಕಟ್ಟೆ ಸಮಸ್ಯೆಯಿಂದ ರೈತರು ನಲುಗಿದ್ದಾರೆ. ಹನಿ ನೀರಾವರಿ, ಉತ್ಪಾದನಾ ವೆಚ್ಚ ತಗ್ಗಿಸಿ ಆದಾಯ ಹೆಚ್ಚಿಸಲು ಯೋಜನೆ ರೂಪಿಸಬೇಕಿದೆ. ಕೊಯ್ಲೋತ್ತರ ನಷ್ಟವು ಕೃಷಿಯ ಅಭಿವೃದ್ಧಿಗೆ ಮಾರಕವಾಗಿದೆ’ ಎಂದು ತಿಳಿಸಿದರು.

‘1.3 ಲಕ್ಷ ಕೋಟಿ ಮೊತ್ತದಷ್ಟು ಶೇಕಡ 30 ರಷ್ಟು ಆಹಾರವು ಪ್ರತಿ ವರ್ಷ ನಷ್ಟವಾಗುತ್ತಿದೆ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ. ದೇಶದಲ್ಲಿ ರೈತರೇ ಇಲ್ಲದಿದ್ದರೆ ದೇಶದ ಸ್ಥಿತಿ ಹೇಗಿರುತ್ತಿತ್ತು ಎನ್ನುವ ಕುರಿತು ಯೋಚಿಸಬೇಕಿದೆ. ರೈತರು ಇರುವ ಕಾರಣ ಕೃಷಿ ವಿಶ್ವವಿದ್ಯಾಲಯ, ಕೃಷಿ ಸಂಘಗಳು, ಸಂಶೋಧನಾ ಸಂಸ್ಥೆಗಳು ಇವೆ. ಅವರಿಂದಾಗಿಯೇ ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದೇವೆ. ಅದಕ್ಕಾಗಿ ಆದರೂ ನಾವು ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಬೇಕಾಗಿದೆ’ ಎಂದು ತಿಳಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾರಾಮುಲ್ಲಾದ ರಾಷ್ಟ್ರೀಯ ಕೃಷಿ ಅಭಿವೃದ್ಧಿ ಸಹಕಾರಿ ನಿಯಮಿತದ ಅಧ್ಯಕ್ಷ ಪಿ. ಕಮರ್-ಉದ್-ದಿನ್, ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡೀನ್ ದಿಲೀಪಕುಮಾರ ಪಾಲ್ಗೊಂಡಿದ್ದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಮಲ್ಲಿಕಾರ್ಜುನ ಡಿ, ಮಲ್ಲೇಶ ಕೊಲಿಮಿ, ಕೆ.ನಾರಾಯಣರಾವ್, ಶಿಕ್ಷಣ ನಿರ್ದೇಶಕ ಗುರುರಾಜ ಸುಂಕದ, ಕೃಷಿ ಎಂಜಿನಿಯರಿಂಗ್‌ ಕಾಲೇಜಿನ ಡೀನ್‌ ಅಯ್ಯನಗೌಡ, ಜಿ. ಬಿ. ಲೋಕೇಶ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಉದಯೋನ್ಮುಖ ತಂತ್ರಜ್ಞರು, ಸಂಶೋಧನಾ ವಿದ್ವಾಂಸರು, ಶೈಕ್ಷಣಿಕ ಮತ್ತು ಕೃಷಿ ಉದ್ಯಮದ ಪ್ರತಿನಿಧಿಗಳು, ನೀತಿ ನಿರೂಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೃವಿವಿಯ ಆಡಳಿತಾಧಿಕಾರಿ ಹಾಗೂ ಸಮ್ಮೇಳನ ಸಂಘಟನಾ ಅಧ್ಯಕ್ಷೆ ಜಾಗೃತಿ ದೇಶಮಾನ್ಯ ಸ್ವಾಗತಿಸಿದರು. ಸಂಗಣ್ಣ ಸಜ್ಜನ ಪ್ರಾರ್ಥನೆ ಗೀತೆ ಹಾಡಿದರು. 

‘ಸಂಶೋಧನೆಗಳ ವಿನಿಮಯವಾಗಲಿ’ ‘ಗುಣಮಟ್ಟದ ಸಂಶೋಧನೆಯಲ್ಲಿ ಕೃಷಿ ವಿಶ್ವವಿದ್ಯಾಲವು ರಾಷ್ಟ್ರಮಟ್ಟದ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಯಾವ ರ್‍ಯಾಂಕಿಂಗ್‌ನಲ್ಲಿ ಇದೆ ಎನ್ನುವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸ್ಥಳೀಯ ವಿದ್ಯಾರ್ಥಿಗಳು ಸ್ಥಳೀಯರೇ ಪ್ರಾಧ್ಯಾಪಕರು ಹಾಗೂ ಸಂಶೋಧಕರು ಇದ್ದರೆ ಹೊಸದನ್ನು ಅರಿತುಕೊಳ್ಳಲು ಸಾಧ್ಯವೆ? ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಹ ಬೇರೆ ವಿಶ್ವವಿದ್ಯಾಲಗಳೊಂದಿಗೆ ಸಂಶೋಧನೆಗಳ ವಿನಿಯಮ ಮಾಡಿಕೊಳ್ಳಬೇಕು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಸಂಶೋಧನೆಗಳ ಬಗೆಗೂ ಅರಿತುಕೊಳ್ಳಬೇಕು‘ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಸಿ. ಎಚ್. ಶ್ರೀನಿವಾಸ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.