ADVERTISEMENT

ಅಂಗೈಯಲ್ಲಿ ಅರಮನೆ ತೋರಿದ ಕೇಂದ್ರ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:35 IST
Last Updated 29 ಮೇ 2020, 16:35 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ರಾಯಚೂರು: ಕೇಂದ್ರ ಸರ್ಕಾರವು ಕೋವಿಡ್‌ ಸಂಕಷ್ಟದ ಪರಿಹಾರವಾಗಿ ಘೋಷಿಸಿದ ₹20 ಲಕ್ಷ ಕೋಟಿ ಅಂಗೈಯಲ್ಲಿ ಅರಮನೆ ತೋರಿಸಿದಂತಾಗಿದೆ. ಇದು ಬರೀ ಸಾಲ ನೀಡುವ ಘೋಷಣೆಯಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದ ಜನರನ್ನು ಮರುಳ ಮಾಡುವ ಕೆಲಸ ಆಗಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥವರಿಗೆ ಉತ್ತೇಜನೆ ಕೊಡುವ ಕೆಲಸವಾಗಿಲ್ಲ. ರೈತರು ಸಾಲದಲ್ಲಿ ಮುಳುಗಿದ್ದಾರೆ. ಮತ್ತೆ ಸಾಲ ಕೊಡುತ್ತೇನೆ ಎನ್ನುವ ಸುಳ್ಳು ಯೋಜನೆಯನ್ನು ಕೇಂದ್ರ ಘೋಷಿಸುತ್ತಿದೆ. ಬಡವರಿಗೆ ನೇರವಾಗಿ ನೆರವು ಕೊಡುವಂತೆ ಅನೇಕ ಆರ್ಥಿಕ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದರು.

ಪ್ರಧಾನಿ ಮೋದಿ ಅವರು ಪೂರ್ವ ಸಿದ್ಧತೆಯಿಲ್ಲದೇ ಲಾಕ್‌ಡೌನ್ ಘೋಷಿಸಿದ್ದರಿಂದ ದೇಶದಲ್ಲಿ ಅಮಾನವೀಯ ಸನ್ನಿವೇಶಗಳು ನಡೆಯುತ್ತಿವೆ. ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಂತಾಗಿದೆ. ಸರ್ಕಾರ ಕುಶಲ ಕಾರ್ಮಿಕರಿಗೆ ಆರು ತಿಂಗಳು ತಲಾ ₹10 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಜ್ಯದಲ್ಲಿಕೋವಿಡ್ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭ್ರಷ್ಟಾಚಾರ ಜರುಗಿರುವುದರ ಎಂದು ಹೇಳಿದೆ ಈ ಕುರಿತು ಸಮಗ್ರ ತನಿಖೆಯಾಗಬೇಕು. ವಿಧಾನಸಭಾಧ್ಯಕ್ಷರು ಲೆಕ್ಕಪತ್ರ ಸಮಿತಿಗೆ ತನಿಖೆ ಹೋಗದಂತೆ ಹೇಳಿರುವುದು ಸರಿಯಲ್ಲ.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧಿಕಾರಿಯ ಮೇಲೆ ದರ್ಪ ತೋರಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳ ಮೇಲೆ ದರ್ಪ ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿ ಇದಾಗಿದೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ, ಶಾಸಕರಾದ ಡಿ.ಎಸ್‌.ಹುಲಗೇರಿ, ಬಸನಗೌಡ ದದ್ದಲ, ಮುಖಂಡರಾದ ವಸಂತಕುಮಾರ್‌, ಹಂಪನಗೌಡ ಬಾದರ್ಲಿ, ರಾಮಣ್ಣಾ ಇರಬಗೇರಾ, ನಗರಸಭೆ ಸದಸ್ಯ ಜಯಣ್ಣ, ಪಾರಸಮಲ್‌ ಸುಖಾಣಿ, ಜಯಂತರಾವ್‌ ಪತಂಗೆ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಅರುಣ ದೋತರಬಂಡಿ, ಹಂಪಯ್ಯ ನಾಯಕ, ಬಸವರಾಜ ರೆಡ್ಡಿ, ಬಷಿರುದ್ದೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.