ADVERTISEMENT

ರಾಯಚೂರು: ಶಾಲಾ ಕಟ್ಟಡ ಬೀಳುತ್ತಿದ್ದರೂ ಕೇಳುವವರಿಲ್ಲ!

ಚಂದ್ರಕಾಂತ ಮಸಾನಿ
Published 29 ಫೆಬ್ರುವರಿ 2024, 5:04 IST
Last Updated 29 ಫೆಬ್ರುವರಿ 2024, 5:04 IST
ರಾಯಚೂರಿನ ಕೆಇಬಿ ಕಾಲೊನಿಯಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಚಾವಣಿಯ ಸಿಮೆಂಟ್‌ ಕಳಚಿ ಬೀಳುತ್ತಿದೆ
ರಾಯಚೂರಿನ ಕೆಇಬಿ ಕಾಲೊನಿಯಲ್ಲಿ ಹತ್ತು ವರ್ಷಗಳ ಹಿಂದೆ ನಿರ್ಮಿಸಿದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಚಾವಣಿಯ ಸಿಮೆಂಟ್‌ ಕಳಚಿ ಬೀಳುತ್ತಿದೆ   

ರಾಯಚೂರು: ಇಲ್ಲಿನ ಕೆಇಬಿ ಕಾಲೊನಿಯಲ್ಲಿನ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಗೆ ತಲುಪಿದೆ. ಕೇವಲ ಹತ್ತು ವರ್ಷಗಳ ಹಿಂದೆ ನಿರ್ಮಿಸಿದ ಈ ಶಾಲೆ ಬೀಳುವ ಹಂತ ತಲುಪಿದೆ. ಶಾಲಾ ಕೊಠಡಿಯೊಳಗಿನ ನೆಲಹಾಸು ಉಬ್ಬಿ ನಿಂತಿದೆ, ಚಾವಣಿಯ ಸಿಮೆಂಟ್‌ ನಿರಂತರವಾಗಿ ಕಳಚಿ ಬೀಳಲಾರಂಭಿಸಿದೆ. ಇದರಿಂದ ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಆಲಿಸಬೇಕಿದೆ.

ಜಿಲ್ಲಾಧಿಕಾರಿ ನಿವಾಸದ ಮುಂದೆಯೇ ಈ ಕಾಲನಿ ಇದೆ. ಶಾಲೆಯ ಕಾರಿಡಾರ್‌ನಲ್ಲಿ ಚಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದೆ. ಅಪಾಯದ ಮುನ್ಸೂಚನೆ ಅರಿತ ಶಿಕ್ಷಕರು, ಮಕ್ಕಳು ಕಾರಿಡಾರ್‌ನಲ್ಲಿ ಓಡಾಡದಂತೆ ಹಗ್ಗ ಹಾಗೂ ತಂತಿ ಕಟ್ಟಿದ್ದಾರೆ. ಮಕ್ಕಳು ಅಪಾಯ ಲೆಕ್ಕಿಸದೇ ನೆರಳಿಗಾಗಿ ಕಾರಿಡಾರ್‌ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇಲ್ಲಿ ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. 

ಬಯಲು ರಂಗ ಮಂದಿರದಂಥ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷಕರು ಪಾಠ ಬೋಧನೆ ಮಾಡುತ್ತಿದ್ದಾರೆ. ಜೋರಾಗಿ ಗಾಳಿ ಬೀಸಿದರೆ ತಕ್ಷಣ ದೂಳು ಆವರಿಸಿಕೊಳ್ಳುತ್ತಿದೆ. ಮಕ್ಕಳು ಪಾಠ ಆಲಿಸುವುದು ಕಷ್ಟವಾಗುತ್ತಿದೆ. ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ADVERTISEMENT

ಶಾಲೆಯಲ್ಲಿ ಒಟ್ಟು 228 ವಿದ್ಯಾರ್ಥಿಗಳು ಹಾಗೂ 10 ಶಿಕ್ಷಕರಿದ್ದಾರೆ. ಬಡ ಕೂಲಿ ಕಾರ್ಮಿಕರ ಮಕ್ಕಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. 

‘ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೇ ಶಾಲೆಯ ದುಸ್ಥಿತಿ ಬಗ್ಗೆ ಲಿಖಿತ ದೂರುಕೊಟ್ಟಿದ್ದೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಬಡ ಕುಟುಂಬದ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಮಕ್ಕಳ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಾಯಚೂರಿನ ವಾಲ್ಮೀಕಿ ವೃತ್ತದ ಬಳಿಯ ಕೆಇಬಿ ಕಾಲೊನಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗ ಮಂದಿರದಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ
ರಾಯಚೂರಿನ ಕೆಇಬಿ ಕಾಲೊನಿಯ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯಗಳ ಬಾಗಿಲುಗಳನ್ನು ಕಿಡಿಗೇಡಿಗಳು ಮುರಿದಿದ್ದಾರೆ
ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಕುರಿತು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆಯಲಾಗಿದೆ. ಹಳೆಯ ಕಟ್ಟಡ ನೆಲಸಮಗೊಳಿಸಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ನಮ್ಮ ಹಂತದಲ್ಲಿ ಸಾಧ್ಯವಿರುವ ಪ್ರಯತ್ನ ಮಾಡಿದ್ದೇನೆ
ಹೀರಾಲಾಲ್‌ ಮುಖ್ಯ ಶಿಕ್ಷಕ
ಶೌಚಾಲಯದ ಬಾಗಿಲು ಮುರಿದ ಕಿಡಿಗೇಡಿಗಳು
ಖಾಸಗಿ ಸಂಸ್ಥೆಯೊಂದು ಮಕ್ಕಳ ಅನುಕೂಲಕ್ಕಾಗಿ ಹೊಸದಾಗಿ ಐದು ಬ್ಲಾಕ್‌ಗಳಿರುವ ಶೌಚಾಲಯ ನಿರ್ಮಿಸಿಕೊಟ್ಟಿದೆ. ಅಲ್ಲಿ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ಕಿಡಿಗೇಡಿಗಳು ಬಾಗಿಲುಗಳನ್ನು ಮುರಿದಿದ್ದಾರೆ. ಶಾಲೆಯ ಮುಂಭಾಗದ ವ್ಯಾಪಾರಸ್ಥರು ಶಾಲಾ ಆವರಣದೊಳಗೆ ಬಂದು ಶೌಚಾಲಯ ಬಳಸುತ್ತಿದ್ದಾರೆ. ಶಾಲಾ ಸಿಬ್ಬಂದಿ ಪ್ರಶ್ನೆ ಮಾಡಿದರೆ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಶಾಲೆಯ ಪ್ರವೇಶ ದ್ವಾರದಲ್ಲೇ ಅಡ್ಡಲಾಗಿ ಐಸ್‌ಕ್ರೀಮ್ ಗಾಡಿ ಇನ್ನಿತರ ಗಾಡಿ ನಿಲ್ಲಿಸಲಾಗುತ್ತಿದೆ. ಮಕ್ಕಳು ಒಳಗೆ ಹೋಗುವುದು ಕಷ್ಟವಾಗುತ್ತಿದೆ. ರಾತ್ರಿ ವೇಳೆಯಲ್ಲಿ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಮದ್ಯ ಸೇವಿಸಿ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಮಾಂಸಾಹಾರ ಸೇವಿಸಿ ಮುಸುರೆಯನ್ನು ಇಲ್ಲಿಯೇ ಚೆಲ್ಲಿ ಹೋಗುತ್ತಿದ್ದಾರೆ. ಕಸ ತೆಗೆದು ಹಾಕುವುದೇ ಶಾಲಾ ಸಿಬ್ಬಂದಿಗೆ ಒಂದು ಕೆಲಸವಾಗಿದೆ ಎಂದು ಶಿಕ್ಷಕಿಯರು ಹೇಳುತ್ತಾರೆ.
ಬಿಇಒಗೆ ಪತ್ರ: ಮುಖ್ಯಶಿಕ್ಷಕ ಹೀರಾಲಾಲ್
‘ರಾಯಚೂರು ಶಿಕ್ಷಣಾಧಿಕಾರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಶಾಲಾ ಕಟ್ಟಡ ಯಾವುದೇ ಸಂದರ್ಭದಲ್ಲಿ ಬೀಳಬಹುದು ಎನ್ನುವುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಳೆಯ ಕಟ್ಟಡ ನೆಲಸಮಗೊಳಿಸಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ. ನಮ್ಮ ಹಂತದಲ್ಲಿ ಸಾಧ್ಯವಿರುವ ಪ್ರಯತ್ನ ಮಾಡಿದ್ದೇನೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಹೀರಾಲಾಲ್‌ ಹೇಳುತ್ತಾರೆ. ‘ನಾನು ಆರು ತಿಂಗಳ ಹಿಂದೆ ಇಲ್ಲಿ ವರ್ಗವಾಗಿ ಬಂದಿರುವೆ. ಶಾಲಾಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವುದನ್ನು ಗಮನಿಸಿ ಅಧಿಕಾರಿಗಳಿಗೆ ಪತ್ರ ಬರೆದಿರುವೆ. ಹೊಸ ಶಾಲಾ ಕಟ್ಟಡ ನಿರ್ಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ‘ ಎಂದು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.