ADVERTISEMENT

ಪರಿಸರ ಸಂರಕ್ಷಣೆಗೆ ಎಲ್ಲರೂ ಸಹಕರಿಸಬೇಕು: ಡಿಡಿಪಿಐ ಬಿ.ಕೆ.ನಂದನೂರು

ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 12:53 IST
Last Updated 25 ಜನವರಿ 2019, 12:53 IST
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರು ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರು ಮಾತನಾಡಿದರು   

ರಾಯಚೂರು: ಶುದ್ಧವಾಗಿದ್ದ ನೀರು, ಗಾಳಿ ಹಾಗೂ ಆಹಾರ ಎಲ್ಲವೂ ಮಲೀನವಾಗಿದ್ದು, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಉಳಿಸುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರು ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶುದ್ಧ ನೀರು ಸಿಗುವಂತಹ ನದಿಗಳು ಮಲೀನವಾಗಿದ್ದು, ಸಮುದ್ರದ ನೀರನ್ನು ಮಲೀನ ಮಾಡಲಾಗಿದೆ. ಆಹಾರ ಕಲಬೆರಕೆಯಾಗಿದೆ. ಪರಿಸರವನ್ನು ನಾಶ ಮಾಡುವ ಮೂಲಕ ಒಳ್ಳೆಯ ಪರಿಸರಕ್ಕಾಗಿ ಪರಿತಪಿಸುವಂತಾಗಿದೆ. ಓಜೋನ್ ಪದರು ಕೂಡ ಹಾನಿಯಾಗಿದ್ದು, ಇನ್ನೂ ಕಷ್ಟದ ದಿನಗಳನ್ನು ಎದುರಿಸಬೇಕಾಗಲಿದೆ ಎಂದರು.

ADVERTISEMENT

ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಪರಿಸರದ ಲಾಭ ಪಡೆಯುತ್ತೇವೆ. ಆದರೆ, ಪರಿಸರ ರಕ್ಷಣೆ ಮಾಡುವ ಕಾರ್ಯವನ್ನು ಮಾತ್ರ ಮಾಡುತ್ತಿಲ್ಲ. ಆದ್ದರಿಂದ ಮನೆಯ ಸುತ್ತಮುತ್ತ ಪರಿಸರವನ್ನು ಕಾಪಾಡುವ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಎಲ್ಲವೂ ಕಾನೂನು, ಕಾಯ್ದೆಗಳಿಂದ ಆಗಲ್ಲ. ಶಾಲೆಗಳು, ಸಮುದಾಯ ಹಾಗೂ ಜನರು ಕೂಡ ತೊಡಗಿಸಿಕೊಂಡು ತಳ ಮಟ್ಟದಿಂದ ಪರಿಸರ ಸಂರಕ್ಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಶಾಲೆಯಲ್ಲಿ ಒಳ್ಳೆಯ ಪರಿಸರ ನಿರ್ಮಾಣ ಮಾಡಿ ಪ್ರಶಸ್ತಿ ಪಡೆಯಬೇಕು ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಬಸಪ್ಪ ಗದ್ದಿ ಉಪನ್ಯಾಸ ನೀಡಿ, ಹಿರಿಯರು ಹಿಂದಿನ ಕಾಲದಲ್ಲಿ ಬೆಳೆದ ಗಿಡಗಳು ಹೆಮ್ಮರಗಳಾಗಿದ್ದು, ಪರಿಸರದ ಬಗ್ಗೆ ಜಾಗೃತಿ ಇಲ್ಲದಿದ್ದರೂ ಪರಿಸರಕ್ಕೆ ಪೂರಕವಾದ ಮರಗಳನ್ನು ಬೆಳೆಸಿದ್ದಾರೆ. ಪ್ರತಿಯೊಂದು ವಸ್ತುವಿನ ಬಗ್ಗೆಯೂ ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು.

ಹಿರಿಯರು ಮಾತನಾಡಿದ್ದು ಕಡಿಮೆ. ಆದರೆ, ಕೆಲಸ ಮಾಡಿದ್ದು ಹೆಚ್ಚು. ಈಗ ಮಾತನಾಡುವವರು ಹೆಚ್ಚಾಗಿದ್ದು, ಕೆಲಸ ಮಾಡುವವರು ಕಡಿಮೆಯಾಗಿದ್ದಾರೆ. ಶಾಲೆಯ ಪರಿಸರ ಉತ್ತಮವಾಗಿದ್ದರೆ ಮಕ್ಕಳ ಕಲಿಕೆಗೂ ಅನುಕೂಲವಾಗಲಿದೆ. ಶಾಲೆಯಲ್ಲಿ ವಾತಾವರಣ, ಮೈದಾನ ಹಾಗೂ ನೀರು ಲಭ್ಯವಿದ್ದರೆ ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡಬಹುದು ಎಂದರು.

ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಸೈಯದ್ ಹಫೀಜುಲ್ಲಾ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪರಿಸರ ಅಧಿಕಾರಿ ಎಂ.ಎಸ್.ನಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.