ಸಿಂಧನೂರು: ‘ಪರಿಶಿಷ್ಟ ಪಂಗಡಕ್ಕೆ ಸೇರಿದವಳು’ ಎಂಬ ಕಾರಣಕ್ಕೆ ತನ್ನನ್ನು ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿರುವ ವಿವಾಹಿತ ಮಹಿಳೆಯೊಬ್ಬರು, ತನ್ನ ತಾಯಿಯೊಂದಿಗೆ ಗಂಡನ ಮನೆಯ ಎದುರು ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಲಿಂಗಾಯತ ಜಂಗಮ ಸಮುದಾಯಕ್ಕೆ ಸೇರಿರುವ ಪತಿ ಸಿದ್ರಾಮಯ್ಯ ಮತ್ತು ಮಾವ ಅಮರಯ್ಯ ಹಿರೇಮಠ ಅವರು ಸದ್ಯ ಮನೆಯಿಂದ ದೂರು ಉಳಿದಿದ್ದು, ಅತ್ತೆ ಚಿನ್ನಮ್ಮ ಮನೆಯ ಮುಂದಿನ ಗೇಟ್‍ಗೆ ಬೀಗ ಹಾಕಿಕೊಂಡು ಒಳಗೆ ಇದ್ದಾರೆ.
ಘಟನೆಯ ಹಿನ್ನೆಲೆ: ಗಂಗಾವತಿಯ ಪರಿಶಿಷ್ಟ ಪಂಗಡದ ರೇಣುಕಮ್ಮ ಮತ್ತು ಲಿಂಗನಗೌಡ ದಂಪತಿಯ ಪುತ್ರಿ ನಯನಾ ಅವರ ವಿವಾಹವು ಸಿಂಧನೂರಿನ ಗಂಗಾನಗರದ ಅಮರಯ್ಯ ಹಿರೇಮಠ ಮತ್ತು ಚಿನ್ನಮ್ಮ ದಂಪತಿ ಪುತ್ರ ಸಿದ್ರಾಮಯ್ಯ ಅವರೊಂದಿಗೆ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ 2023ರ ಜ.25ರಂದು ವರನ ನಿವಾಸದಲ್ಲೇ ಜರುಗಿತ್ತು ಎನ್ನಲಾಗಿದೆ.
‘ಮದುವೆಗೆ ಸಾರ್ವಜನಿಕರನ್ನು ಕರೆದರೆ ಜಾತಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಯಾರನ್ನೂ ಕರೆಯದೇ ವಧು ಮತ್ತು ವರನ ಕುಟುಂಬದವರು ಮಾತ್ರ ಮದುವೆಯಲ್ಲಿ ಭಾಗವಹಿಸಿದ್ದರು’ ಎಂದು ಸಂತ್ರಸ್ತೆಯ ತಾಯಿ ರೇಣುಕಮ್ಮ ಹೇಳುತ್ತಾರೆ.
‘ಮದುವೆಯಾದ ಆರಂಭದಲ್ಲಿ ಪತಿ ಮತ್ತು ಅತ್ತೆ ಮಾವ ತನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ನಾಲ್ಕು ತಿಂಗಳ ನಂತರ ‘ಯಾರಾದರೂ ಮನೆಗೆ ಬಂದರೆ ಹೊರಗೆ ಬರಬಾರದು. ‘ಬೇಡ ಜಾತಿ’ಯವಳು ಎಂದು ಯಾರಿಗೂ ಹೇಳಬಾರದು’ ಎಂದು ಕಟ್ಟಪ್ಪಣೆ ಮಾಡಿದರು. ಮದುವೆಗೆ ಮೊದಲು ಇದನ್ನೆಲ್ಲ ಹೇಳಬೇಕಿತ್ತು ಎಂದು ಪ್ರಶ್ನಿಸಿದಕ್ಕೆ ನಿತ್ಯ ಒಂದಿಲ್ಲೊಂದು ಕಾರಣವೊಡ್ಡಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಸಂತ್ರಸ್ತೆ ನಯನಾ ಆರೋಪಿಸಿದ್ದಾರೆ.
‘ಮನೆಗೆ ಯಾರಾದರೂ ಬಂದರೆ ಸ್ಟೋರ್ ರೂಮ್‍ಗೆ ಕಳುಹಿಸಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದರು. ಈ ವಿಚಾರಕ್ಕೆ ಆಗಾಗ ಮನೆಯಲ್ಲಿ ವಾದ–ವಿವಾದ ನಡೆಯುತ್ತಿತ್ತು. 2024ರ ಅ.1ರಂದು ನನ್ನ ಮೊಬೈಲ್ ಕಸಿದುಕೊಂಡು ಒತ್ತಾಯ ಪೂರ್ವಕವಾಗಿ ಅತ್ತೆ ಚಿನ್ನಮ್ಮ, ಅತ್ತೆಯ ತಂಗಿ ಮತ್ತು ಮಾವ ಅಮರಯ್ಯ ಹಿರೇಮಠ ಅವರು ಕಾರಿನಲ್ಲಿ ಕರೆದೊಯ್ದು ಗಂಗಾವತಿಯ ನಮ್ಮ ಅಜ್ಜಿಯ ಮನೆಗೆ ಬಿಟ್ಟುಬಂದರು. ಮರುದಿನ ಪತಿ ಸಿದ್ರಾಮಯ್ಯ ಗಂಗಾವತಿಗೆ ಬಂದು ತಮ್ಮ ತಂದೆ–ತಾಯಿಯಿಂದ ತಪ್ಪಾಗಿದ್ದು, ಜಾತ್ರೆ ಮುಗಿಯುವ ತನಕ ಒಂದು ವಾರ ಇಲ್ಲೇ ಇರು; ನಂತರ ಬಂದು ಕರೆದೊಯ್ಯುವೆ ಎಂದು ಹೇಳಿ ಹೋಗಿದ್ದರು. ನಂತರ ಮೊಬೈಲ್ ಸ್ವೀಚ್ಡ್‌ಆಫ್ ಮಾಡಿಕೊಂಡಿದ್ದು, ಮೂರು ತಿಂಗಳಿಂದ ಮಾತನಾಡಿಲ್ಲ. ಗಂಗಾವತಿಯ ಮಹಿಳಾ ಕೇಂದ್ರ, ಪೊಲೀಸರ ಮಧ್ಯಪ್ರವೇಶಕ್ಕೂ ಪತಿ ಸ್ಪಂದಿಸುತ್ತಿಲ್ಲ’ ಎಂದು ನಯನಾ ದೂರಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಎರಡೂ ಕುಟುಂಬಗಳಿಗೆ ಒಳ್ಳೆಯದಾಗುತ್ತೆ ಎಂದು ಭಾವಿಸಿದ್ದೆವು. ಪತ್ನಿ ಕಡೆಯವರು ಮಾಡಿದ ತೊಂದರೆಯಿಂದ ನನ್ನ ಮಗ ಬೇಸತ್ತಿದ್ದಾನೆ. ಆತನೇ ಪತ್ನಿಯನ್ನು ನಿರಾಕರಿಸುತ್ತಿದ್ದಾನೆ. ನಾವು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲಅಮರಯ್ಯ ಹಿರೇಮಠ ಸಿದ್ರಾಮಯ್ಯ ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.