ADVERTISEMENT

ರೈತರಿಂದ ಹಣ ವಸೂಲಿ ಆರೋಪ: ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:30 IST
Last Updated 22 ನವೆಂಬರ್ 2025, 6:30 IST
ಜಾಲಹಳ್ಳಿಯಲ್ಲಿ ಉಪ ತಹಶೀಲ್ದಾರ್ ಗೋವಿಂದ‌ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು
ಜಾಲಹಳ್ಳಿಯಲ್ಲಿ ಉಪ ತಹಶೀಲ್ದಾರ್ ಗೋವಿಂದ‌ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು   

ಜಾಲಹಳ್ಳಿ: ರೈತರಿಂದ ಹಣ ವಸೂಲಿ ಮಾಡಿ ವಂಚಿಸಿದ ಗ್ರಾಮ ಲೆಕ್ಕಾಧಿಕಾರಿ ರವಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸೇವೆಯಿಂದ ವಜಾ ಮಾಡಬೇಕು. ವಂಚನೆಗೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಉಪ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಸಂಘದ ಅಧ್ಯಕ್ಷ ಹನುಮಂತ ಮಡಿವಾಳ ಮಾತನಾಡಿ,‘ಗ್ರಾಮ ಲೆಕ್ಕಾಧಿಕಾರಿ ರವಿ ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಮುಕ್ಕನಾಳ, ಗಾಜಲದಿನ್ನಿ, ಕರಡಿಗುಡ್ಡ, ಅಮರಪುರ ಗ್ರಾಮಗಳ ರೈತರನ್ನು ನಂಬಿಸಿ ಪ್ರಕೃತಿ ವಿಕೋಪದಡಿ ಬೆಳೆ ಪರಿಹಾರ, ಮನೆ ಹಾಳಾಗಿರುವ ವರದಿ ಸಲ್ಲಿಸಿ ಬ್ಯಾಂಕ್ ಖಾತೆಗೆ ₹50 ಸಾವಿರದಿಂದ ₹60 ಸಾವಿರ ಪರಿಹಾರ ಜಮಾ ಮಾಡಿಸುವುದಾಗಿ ಹಣ ವಸೂಲಿ ಮಾಡಿದ್ದಾರೆ’ ಎಂದು ದೂರಿದರು.

‘ರೈತರು ತಮ್ಮ ಖಾತೆಗೆ ಇನ್ನೂ ಹಣ ಯಾಕೆ ಜಮಾ ಅಗಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾ ಕಾಲಹರಣ ಮಾಡಿದ್ದಾರೆ. ರೈತರು ಇದನ್ನು ಕಂದಾಯ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿ ರವಿ ಅವರನ್ನು ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು. 

ADVERTISEMENT

ಉಪ ತಹಶೀಲ್ದಾರ್ ಗೋವಿಂದ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರಂಗನಾಥ ಬುಂಕಲದೊಡ್ಡಿ, ಹನುಮಂತಪ್ಪ ಮಂಡಲಗುಡ್ಡ, ಮಕ್ತೂಮ್ ಬಾಷಾ, ಶಿವಪ್ಪ, ರಿಯಾಜ್ ಆರ್ತಿ, ಶಿವಮಾನ್ಯಪ್ಪ ತ್ಯಾಪ್ಲಿ ಸೇರಿದಂತೆ ಇತರರು ಹಾಜರಿದ್ದರು.