ADVERTISEMENT

ಬಸಿ ನೀರಿಗೆ ಬೆಚ್ಚಿದ ಸರ್ಜಾಪುರ

ಸಂಗ್ರಹಿಸಿಟ್ಟಿದ್ದ ಜೋಳ ನಾಶ: ಹಗೆವುಗಳಿಂದ ತೆಗೆದು ಒಣಗಿಸುತ್ತಿರುವ ರೈತರು, ನಷ್ಟ ಭೀತಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಅಕ್ಟೋಬರ್ 2020, 7:49 IST
Last Updated 25 ಅಕ್ಟೋಬರ್ 2020, 7:49 IST
ಲಿಂಗಸುಗೂರು ತಾಲ್ಲೂಕಿನ ಸರ್ಜಾಪುರದ ಹಗೆವುಗಳಲ್ಲಿ ಬಸಿನೀರು ಕಾಣಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರು ಮೇಲ್ಭಾಗದ ಜೋಳವನ್ನು ಹಗೆವುದಿಂದ ತೆಗೆದು ಒಣಗಿಸುತ್ತಿದ್ದಾರೆ
ಲಿಂಗಸುಗೂರು ತಾಲ್ಲೂಕಿನ ಸರ್ಜಾಪುರದ ಹಗೆವುಗಳಲ್ಲಿ ಬಸಿನೀರು ಕಾಣಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರು ಮೇಲ್ಭಾಗದ ಜೋಳವನ್ನು ಹಗೆವುದಿಂದ ತೆಗೆದು ಒಣಗಿಸುತ್ತಿದ್ದಾರೆ   

ಲಿಂಗಸುಗೂರು: ತಾಲ್ಲೂಕಿನ ಸರ್ಜಾಪುರ ಗ್ರಾಮ ಗುಣಮಟ್ಟದ ಬಿಳಿ ಜೋಳಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿ. ಹಗೆವುಗಳಲ್ಲಿ ಬಸಿ ನೀರು ಹರಿದು, ಸಂಗ್ರಹಿಸಿದ ಜೋಳ ದುರ್ನಾತ ಬೀರುತ್ತಿದೆ. ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

ತಾಲ್ಲೂಕು ಕೇಂದ್ರದಿಂದ 7 ಕಿ.ಮೀ ಅಂತರದ ರಾಯಚೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ಜಾಪುರದಲ್ಲಿ 700 ಕುಟುಂಬಗಳು ವಾಸವಾಗಿವೆ. ಈ ಗ್ರಾಮದ ಅಮರೇಶ್ವರ ದೇವಸ್ಥಾನದ ಮುಂಭಾಗದ ಬಯಲಿನಲ್ಲಿ ಕನಿಷ್ಠ 100 ಹಗೆವುಗಳು ಇವೆ. ಗ್ರಾಮದ ಇತರೆಡೆ ಒಟ್ಟು 250 ಕ್ಕೂ ಹೆಚ್ಚು ಹಗೆವುಗಳಿವೆ. 50 ರಿಂದ 250 ಚೀಲ (ಕ್ವಿಂಟಾಲ್‍ಗೂ ಹೆಚ್ಚು ತೂಕದ) ಜೋಳ ಹಿಡಿಯುವ ಹಗೆವುಗಳು ಇಲ್ಲಿ
ಕಾಣ ಸಿಗುತ್ತವೆ.

ಪ್ರತಿ ವರ್ಷ ಜೋಳ ಬೆಳೆಯುವ ಬಹುತೇಕ ರೈತರು ಮುಂದಿನ ಬೆಳೆ ತೆನೆ ಕಟ್ಟುವ ಹಂತದಲ್ಲಿ ಮಾತ್ರ ಮಾರುಕಟ್ಟೆಗೆ ಜೋಳ ಮಾರಾಟ ಮಾಡುವುದು ವಾಡಿಕೆ. ಹೀಗಾಗಿ ಹಗೆವುಗಳಲ್ಲಿ ಜೋಳ ಸಂಗ್ರಹಣೆ ಮಾಡಲಾಗುತ್ತದೆ. ಹದಿನೈದು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಬೆರಳೆಣಿಕೆಯಷ್ಟು 70 ರಿಂದ 80 ಚೀಲ ಹಿಡಿಯುವ ಹಗೆವುಗಳಲ್ಲಿ ಬಸಿನೀರು ಕಾಣಿಸಿಕೊಂಡು ಸಂಗ್ರಹ ಮಾಡಿಕೊಂಡಿದ್ದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.

ADVERTISEMENT

ಅತಿವೃಷ್ಟಿ, ಅನಾವೃಷ್ಟಿಯಿಂದ ಹಸಿ-ಒಣ ಬರದ ಮಧ್ಯೆ ಬದುಕು ಕಟ್ಟಿಕೊಂಡ ರೈತರಿಗೆ ಬಸಿ ನೀರು ಶಾಪವಾಗಿ ಪರಿಣಮಿಸಿದೆ.

ಏಕಅಮರಣ್ಣ, ಯಲ್ಲಪ್ಪ, ಶರಣಪ್ಪ ಚಲುವಾದಿ, ಅಮರಪ್ಪ ಚಲುವಾದಿ, ಅಯ್ಯಪ್ಪ ದೇವಿಕೇರಿ, ಸಾಬಣ್ಣ ಕವಲಿ ಸೇರಿದಂತೆ ಕೆಲ ರೈತರ ಹಗೆವು ತೆಗೆದು ಪರೀಕ್ಷಿಸಿದಾಗ ಬಸಿ ನೀರಿನಿಂದ ಜೊಳ ಕೊಳೆತು ದುರ್ನಾತ ಬೀರುತ್ತಿದೆ. ಅದರಲ್ಲಿಯೇ ಮೇಲ್ಭಾಗದ ಜೋಳ ತೆಗೆದು ಶುದ್ಧ ನೀರಿನಿಂದ ತೊಳೆದು ಒಣಗಿಸುವ ಪ್ರಯತ್ನ
ಮುಂದುವರಿದಿದೆ.

‘ಕಂದಾಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನೂರಾರು ಕ್ವಿಂಟಾಲ್ ಜೋಳ ಹಾನಿಗೀಡಾಗಿದೆ. ಒಂದಿಲ್ಲೊಂದು ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆರ್ಥಿಕ ನೆರವು ಘೋಷಿಸಬೇಕು’ ಎಂದು ದಳಪತಿ ಶಂಕರಗೌಡ ಯರಡೋಣ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.