ಹಟ್ಟಿಚಿನ್ನದಗಣಿ: ಅಜವಾನ ಬೆಳೆಯುವ ರೈತರು ಬಂಪರ್ ಬೆಲೆ ನಿರೀಕ್ಷೆಯಲ್ಲಿ ಇದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರೈತರು ಕೃಷಿಯಲ್ಲಿ ಆಸಕ್ತಿ ಮೂಡಿಸಿಕೊಂಡು ಅಜವಾನ ಬೆಳೆದಿದ್ದಾರೆ. ಈಗ ಸಾಂಪ್ರಾದಾಯಿಕ ಬೆಳೆಗಳ ಬದಲಾಗಿ ಔಷಧಿ ಮತ್ತು ಸುಗಂಧದ್ರವ್ಯ ಗುಣಲಕ್ಷಣ ಹೊಂದಿರುವ ಅಜವಾನ ಬಿತ್ತನೆ ಮಾಡಿದ್ದಾರೆ.
15 ಕೆ.ಜಿ ಅಜವಾನ ಬಿತ್ತಿದರೆ ಎಕರೆಗೆ 3ರಿಂದ 4 ಕ್ವಿಂಟಲ್ ಫಸಲು ಬರುವ ನಿರೀಕ್ಷೆಯಿದೆ. ಈ ಭಾರಿ ಗೌಡೂರು, ರೋಡಲಬಂಡ, ಗುರುಗುಂಟಾ, ಹಟ್ಟಿ ಅತಿ ಹೆಚ್ಚಿನ ರೈತರು ಅಜವಾನ ಬಿತ್ತನೆ ಮಾಡಿ ಕಪ್ಪು ಮಣ್ಣಿನಲ್ಲೂ ಉತ್ತಮ ಬೆಳೆ ಬೆಳೆಯಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
‘ಮೊಳಕೆಯೊಡೆದಾಗ ಕೊತ್ತಂಬರಿಯಂತೆ ಕಾಣುವ ಅಜವಾನ ದೊಡ್ಡದಾದಂತೆ ಸಬ್ಬಸ್ಸಿನ ಸೊಪ್ಪಿನಂತೆ ಕಾಣುತ್ತದೆ. ಬಿತ್ತನೆ ಮಾಡಿದ ನಂತರ 20ರಿಂದ 30 ದಿನಕ್ಕೆ ಮೊಳಕೆಯೊಡೆದು 3ರಿಂದ 4 ಅಡಿ ಎತ್ತರಕ್ಕೆ ಬೆಳೆಯುತ್ತದೆ’ ಎನ್ನುತ್ತಾರೆ ರೈತ ಯಂಕೋಬ ಪವಾಡೆ.
‘ಮಳೆ ಕಡಿಮೆಯಾದರೂ ಚಿಂತಿ ಮಾಡಂಗಿಲ್ಲ. ಹೆಚ್ಚಾದರಂತೂ ಹೆಚ್ಚಿನ ಲಾಭ. ಆದರೆ ಹತ್ತಿ, ತೊಗರಿ ಬಿತ್ತಿದರೆ ಮಳೆ ಬರದಿದ್ದರೆ ತ್ರಾಸು ಹೆಚ್ಚಾದರೂ ತ್ರಾಸು. ಆದರೆ ಅಜವಾನ ಹಂಗಲ್ಲ. ಮೊಳಕೆ ಬರಲಾರದೆ ಉಳಿದ ಜಾಗದೊಳಗೆ ಬೇರೆ ಬೀಜ ಊರಬಹುದು. ಔಷಧ ಖರ್ಚು ಕಡಿಮೆ. ಫಲವನ್ನು ನೇರವಾಗಿ ಆಂಧ್ರಪ್ರದೇಶ ಮಾರುಕಟ್ಟೆಗೆ ಕೊಂಡೊಯ್ದರೆ ಛಲೋ ಧಾರಣೆ ಸಿಗಲಿದೆ’ ಎನ್ನುತ್ತಾರೆ ಈ ಭಾಗದ ಅಜವಾನ ಬೆಳೆದ ರೈತರು.
ರೈತರು ಒಂದೇ ಬಗೆಯ ಬೆಳೆ ಬೆಳೆಯುವ ಬದಲಾಗಿ ವಿವಿಧ ಬೆಳೆಯನ್ನು ಬೆಳೆಯುವ ಮನಸ್ಸು ಮಾಡಿದರೆ ಭೂಮಿಯ ಫಲವತ್ತತೆ ಹೆಚ್ಚಿ ಅಧಿಕ ಇಳುವರಿ ಲಾಭ ಪಡೆಯಬಹುದು.-ವೀರೇಶ ಅಂಗಡಿ, ಗೌಡೂರು ರೈತ
ಹಟ್ಟಿ ಪಟ್ಟಣದ ಸುತ್ತಮುತ್ತ ಕೆಲವು ಗ್ರಾಮದಲ್ಲಿ ರೈತರು ಈ ಭಾರಿ ಅಜವಾನ ಬೆಳೆದಿದ್ದಾರೆ. ಬೇಕಾದ ಸೌಲಭ್ಯಗಳನ್ನು ರೈತ ಸಂಪರ್ಕ ಕೇಂದ್ರದಿಂದ ಪಡೆದುಕೊಂಡು ಪ್ರಗತಿ ಸಾಧಿಸಬೇಕು.ಶಿವರಾಜ, ಕೃಷಿ ಅಧಿಕಾರಿ, ಗುರುಗುಂಟಾ ರೈತ ಸಂಪರ್ಕ ಕೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.