ADVERTISEMENT

ತೋರಣದಿನ್ನಿ | ಪ್ರಭಾವಿ ರೈತರಿಗೆ ಅಧಿಕ ರಸ ಗೊಬ್ಬರ ವಿತರಣೆ: ಆರೋಪ

ಗ್ರಾಮದಲ್ಲಿ ರಸ ಗೊಬ್ಬರ ಖರೀದಿಗೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 7:21 IST
Last Updated 18 ಆಗಸ್ಟ್ 2025, 7:21 IST
ಕವಿತಾಳ ಸಮೀಪದ ತೋರಣದಿನ್ನಿ ಗ್ರಾಮದಲ್ಲಿ ಭಾನುವಾರ ರಸಗೊಬ್ಬರ ಖರೀದಿಗೆ ನೂರಾರು ರೈತರು ಸರದಿ ಸಾಲಿನಲ್ಲಿ ನಿಂತಿದ್ದರು
ಕವಿತಾಳ ಸಮೀಪದ ತೋರಣದಿನ್ನಿ ಗ್ರಾಮದಲ್ಲಿ ಭಾನುವಾರ ರಸಗೊಬ್ಬರ ಖರೀದಿಗೆ ನೂರಾರು ರೈತರು ಸರದಿ ಸಾಲಿನಲ್ಲಿ ನಿಂತಿದ್ದರು   

ಕವಿತಾಳ: ಸಮೀಪದ ತೋರಣದಿನ್ನಿ ಗ್ರಾಮದಲ್ಲಿ ಭಾನುವಾರ ರಸಗೊಬ್ಬರ ಖರೀದಿಗೆ ಸರದಿ ಸಾಲಿನಲ್ಲಿ ನಿಂತ ನೂರಾರು ರೈತರು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ಪಡೆಯಲು ಗೋದಾಮು ಎದುರು ಕಿ.ಮೀ. ಸರದಿ ಸಾಲಿನಲ್ಲಿ ನಿಂತ ತೋರಣದಿನ್ನಿ ಸೇರಿ ಸುತ್ತಲಿನ ಹಳ್ಳಿ ಹಾಗೂ ಕ್ಯಾಂಪ್‌ಗಳ ರೈತರು ರಸಗೊಬ್ಬರ ಕೊರತೆಯಿಂದ ಸಣ್ಣ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.

‌‘ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಕ್ಕೆ ಬಿಡುಗಡೆಯಾಗಿದ್ದ ಅಂದಾಜು 1200 ಚೀಲ ರಸಗೊಬ್ಬರವನ್ನು ತಮಗೆ ಬೇಕಿದ್ದ ಪ್ರಭಾವಿ ರೈತರಿಗೆ 40 ರಿಂದ 50 ಚೀಲದಂತೆ ಮಾರಾಟ ಮಾಡಿ ಬೇರೆ ರೈತರ ಹೆಸರಿನಲ್ಲಿ ರಶೀದಿ ಹಾಕಿದ್ದಾರೆ, ರಶೀದಿಯಲ್ಲಿರುವ ಹೆಸರಿನ ರೈತರು ರಸಗೊಬ್ಬರ ಖರೀದಿಸಿಲ್ಲ’ ಎಂದು ರಾಮಣ್ಣ, ಬಸವರಾಜ, ಗಂಗಾಧರ ಬಾರಿಕೇರ, ಹನುಮೇಶ ನಾಯಕ, ಯಂಕಪ್ಪ ಬಾರಿಕೇರ, ಉಮಾಪತಿ, ರವಿಕುಮಾರ, ಹುಸೇನಪ್ಪ ಮತ್ತು ದೇವರಾಜ ಮತ್ತಿತರರು ಆರೋಪಿಸಿದರು.

ADVERTISEMENT

‌‘ಜೂನ್‌, ಜುಲೈ ತಿಂಗಳಲ್ಲಿ ಬಿಡುಗಡೆಯಾಗಿದ್ದ 1200 ಚೀಲ ರಸಗೊಬ್ಬರವನ್ನು ಜುಲೈ ತಿಂಗಳಲ್ಲಿಯೇ ಮಾರಾಟ ಮಾಡಲಾಗಿದೆ, ಆಗ ಬೇಡಿಕೆ ಇರಲಿಲ್ಲ, ಈಗ ಕೊರತೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದೆ, ಈಗ ನಮ್ಮಲ್ಲಿ ದಾಸ್ತಾನು ಲಭ್ಯವಿಲ್ಲ’ ಎಂದು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಕಾರ್ಯದರ್ಶಿ ಬಸ್ಸಯ್ಯಸ್ವಾಮಿ ಹಿರೇಮಠ ಹೇಳಿದರು.

ಕವಿತಾಳ ಸಮೀಪದ ತೋರಣದಿನ್ನಿಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಲ್ಲಿ ರಸಗೊಬ್ಬರ ವಿತರಿಸುತ್ತಿಲ್ಲ ಎಂದು ರೈತರು ಆರೋಪಿಸಿದರು.
ರೈತರ ಆರೋಪದ ಹಿನ್ನೆಲೆಯಲ್ಲಿ ದಾಸ್ತಾನು ಹಾಗೂ ಮಾರಾಟದ ಸಂಪೂರ್ಣ ವಿವರ ನೀಡುವಂತೆ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಕ್ಕೆ ನೊಟೀಸ್‌ ನೀಡಲಾಗಿದೆ
ಗುರುನಾಥ ಸಹಾಯಕ ಕೃಷಿ ನಿರ್ದೇಶಕ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.