ADVERTISEMENT

ಕೊನೆಗೂ ಬಂತು ಬಸ್: ಗ್ರಾಮಸ್ಥರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2018, 17:50 IST
Last Updated 25 ಜುಲೈ 2018, 17:50 IST
ಶಕ್ತಿನಗರ ಬಳಿಯ ಜಿ.ತಿಮ್ಮಾಪುರ ಗ್ರಾಮಕ್ಕೆ ಬುಧವಾರ ಆಗಮಿಸಿದ ಬಸ್‌ಗೆ ತಳಿರು ತೋರಣಗಳ ಸಿಂಗಾರಿಸಿ ಗ್ರಾಮಸ್ಥರು ಸಂಭ್ರಮಿಸಿದರು
ಶಕ್ತಿನಗರ ಬಳಿಯ ಜಿ.ತಿಮ್ಮಾಪುರ ಗ್ರಾಮಕ್ಕೆ ಬುಧವಾರ ಆಗಮಿಸಿದ ಬಸ್‌ಗೆ ತಳಿರು ತೋರಣಗಳ ಸಿಂಗಾರಿಸಿ ಗ್ರಾಮಸ್ಥರು ಸಂಭ್ರಮಿಸಿದರು   

ಶಕ್ತಿನಗರ: ಮೊದಲ ಬಾರಿ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬಸ್‌ ಸಂಚರಿಸುವುದು ಕಂಡು ಜಿ.ತಿಮ್ಮಾಪುರದ ಗ್ರಾಮಸ್ಥರು ಸಂಭ್ರಮಪಟ್ಟರು. ಬಸ್‌ ಸ್ವಾಗತಿಸಲು ತಳಿರು ತೋರಣಗಳ ಸಿಂಗಾರ ಮಾಡಿದರು. ಆರತಿ ಎತ್ತಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸಪಟ್ಟರು. ಜೇಗರಕಲ್‌ ತಾಲ್ಲೂಕು ಪಂಚಾಯಿತಿ ಸದಸ್ಯೆ ಶೀಲಾಸಿದ್ಧನಗೌಡ ಬಸ್‌ ಸಂಚಾರಕ್ಕೆ ಚಾಲನೆ ನೀಡಿದರು.

ದೇವಸೂಗೂರು ಮತ್ತು ಚಿಕ್ಕಸೂಗೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಕಾಲಕ್ಕೆ ಹೋಗಲು ಆಗುತ್ತಿಲ್ಲ. ಸಂಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ನಿವಾರಣೆಯಾಗುತ್ತಿಲ್ಲ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರು. ಇದಕ್ಕೆಲ್ಲ ಪರಿಹಾರ ಎಂಬಂತೆ ಬಸ್‌ ಸಂಚಾರ ಆರಂಭಗೊಂಡಿರುವುದು ಕಂಡು ಗ್ರಾಮಸ್ಥರು ಹರ್ಷಗೊಂಡರು. ಜೆ.ಮಲ್ಲಾಪುರ, ಹೆಂಬೆರಾಳ, ಜಿ.ತಿಮ್ಮಾಪುರ ಸೇರಿ ಹಲವು ಗ್ರಾಮಗಳಲ್ಲಿ ಸಂತಸ ಕಂಡು ಬಂತು.

‘ಈ ಬಾರಿ ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದ ಶಾಸಕರಾಗಿ ಬಸನಗೌಡ ದದ್ದಲ ಆಯ್ಕೆಯಾದ ನಂತರ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಗ್ರಾಮಕ್ಕೆ ಬಸ್‌ ವ್ಯವಸ್ಥೆ ಮಾಡಿದ್ದಾರೆ ಎಂದು ಜೇಗರಕಲ್‌ ತಾಲ್ಲೂಕು ಪಂಚಾಯಿತಿ ಸದಸ್ಯೆ ಶೀಲಾಸಿದ್ಧನಗೌಡ ತಿಳಿಸಿದರು.

ADVERTISEMENT

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಕೆ.ಬಸವರಾಜ ಮಾತನಾಡಿ, ‘ಜಿ.ತಿಮ್ಮಾಪುರ ಗ್ರಾಮದಲ್ಲಿ ಬಸ್‌ ರಾತ್ರಿ ಮೊಕ್ಕಾಂ ಮಾಡಿ, ಶಾಲಾಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಅನುಕೂಲ ತಕ್ಕಂತೆ ದಿನಕ್ಕೆ ಎರಡು ಬಾರಿ ಬಸ್‌ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂದರು. ಮುಖಂಡರಾದ ಶರಣಬಸವ, ಶರಣಗೌಡ, ದೇವಪ್ಪ, ಶಾಸಕ ಆಪ್ತ ಸಹಾಯಕ ಗುರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವ ಕುರಿತು ಪ್ರಜಾವಾಣಿಯ ಜುಲೈ 23ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.