ಶಕ್ತಿನಗರ: ಕೃಷ್ಣಾನದಿಯ ಪ್ರವಾಹದಿಂದ ದೇವಸೂಗೂರು ಹೋಬಳಿಯ ನದಿ ತೀರದ ಮೀನುಗಾರರ ಸಲಕರಣೆಗಳು ನದಿ ಪಾಲಾಗಿದ್ದು, ಜೀವನ ಸಾಗಿಸಲು ಕಷ್ಟಕರವಾಗಿದೆ.
ರಾಯಚೂರು ತಾಲ್ಲೂಕಿನ ಗಂಜಳ್ಳಿ, ಕೊರ್ವಿಹಾಳ್, ಕೊರ್ತಕುಂದ, ಮಾಮಡದೊಡ್ಡಿ, ಡಿ.ರಾಂಪುರ, ಕುರ್ವಕುಲಾ, ಆತ್ಕೂರು, ಬುರ್ದಿಪಾಡ, ಯಾಪಲದಿನ್ನಿ ಗ್ರಾಮದ ನದಿ ತೀರದಲ್ಲಿ ಹೆಚ್ಚುವರಿ ನೀರು ಬಿಟ್ಟ ಪರಿಣಾಮ, ನೀರಿನ ಹರಿವು ಹೆಚ್ಚಳವಾಗಿದೆ. ಇದರಿಂದ ಮೀನುಗಾರರ ಸಲಕರಣೆಗಳಾದ ಹರಿಗೋಲು, ಪುಟ್ಟಿ, ಲೈಫ್ ಜಾಕೆಟ್, ಬಲೆಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಬಾರಿ ಕೃಷ್ಣಾ ನದಿಗೆ ನೀರು ಹರಿದು ಬರುವ ಕುರಿತು ಅಧಿಕಾರಿಗಳು ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ ಎನ್ನುತ್ತಿದ್ದಾರೆ ಮೀನುಗಾರರು.
ಜೀವನೋಪಾಯಕ್ಕಾಗಿ ಮೀನುಗಳನ್ನು ಹಿಡಿಯಲು ಗಾಳಿ, ಮಳೆ ಎನ್ನದೆ ಜೀವನವನ್ನು ಪಣಕ್ಕಿಟ್ಟು ನದಿಗೆ ಹೋಗುತ್ತಾರೆ. ಅವರ ಕಾಯಕಕ್ಕೆ ಯಾವುದೇ ಸಮಯವಿಲ್ಲ. ಮೀನುಗಳು ಸಿಕ್ಕರೆ ಮಾತ್ರ, ಆ ದಿನದ ಊಟ, ಸಿಗದಿದ್ದರೆ ಉಪವಾಸ. ಇದರಿಂದ ಮೀನುಗಾರಿಕೆ ನಂಬಿ ಜೀವನ ಸಾಗಿಸುವ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ.
‘ಪ್ರವಾಹದಿಂದಾಗಿ ಮೀನುಗಾರಿಕೆ ಕುಂಠಿತಗೊಂಡಿದೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಲ್ಲಿನ ಬಹುತೇಕ ಮೀನುಗಾರರು ಮೀನುಗಾರಿಕೆಯನ್ನು ನಂಬಿಯೇ ಜೀವನ ಸಾಗಿಸಬೇಕಾದ ಅನಿರ್ವಾಯತೆ ಇರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಮೀನುಗಾರರಾದ ಲಕ್ಷ್ಮಣ ಗಂಜಳ್ಳಿ, ವಿರೇಶ .ಡಿ.ರಾಂಪುರ ಮನವಿ ಮಾಡಿದರು.
ಸಲಕರಣೆಗಳು ಇಲ್ಲದೆ, ಮುಂದಿನ ಜೀವನೋಪಾಯಕ್ಕೆ ಮೀನುಗಾರಿಕೆ ಮಾಡಲು ತೊಂದರೆಯಾಗಿದೆ. ಮೀನುಗಾರಿಕೆ ಇಲಾಖೆಯಿಂದ ಬೆರಳಣಿಕೆಯಷ್ಟು ಮೀನುಗಾರರಿಗೆ ಮಾತ್ರ, ಸಲಕರಣೆಗಳನ್ನು ನೀಡುತ್ತಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರಿಕೆ ಸಲಕರಣೆಗಳ ಕಟ್ಟುಗಳನ್ನು ಬಡ ಕುಟುಂಬದ ಮೀನುಗಾರಿಗೆ ಒದಗಿಸಬೇಕಾಗಿದೆ ಎನ್ನುವುದು ಅವರ ಕೋರಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.