ADVERTISEMENT

ಶ್ರೀಶೈಲ ಭಕ್ತರಿಗೆ ಅನ್ನದಾಸೋಹ, ವೈದ್ಯಕೀಯ ಸೇವೆ

ಭಗವತ್‌ಭಕ್ತ ಮಂಡಳಿ, ನರಸಿಂಹರಾಮ ಪ್ರಭು ಎಜುಕೇಷನ್‌ ಟ್ರಸ್ಟ್‌ನಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 14:08 IST
Last Updated 7 ಏಪ್ರಿಲ್ 2019, 14:08 IST
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ಅನ್ನದಾಸೋಹ ಹಾಗೂ ಉಚಿತ ವೈದ್ಯಕೀಯ ಸೇವೆಗೆ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ರಾಯಚೂರಿನಲ್ಲಿ ಭಾನುವಾರ ಆಯೋಜಿಸಿದ್ದ ಅನ್ನದಾಸೋಹ ಹಾಗೂ ಉಚಿತ ವೈದ್ಯಕೀಯ ಸೇವೆಗೆ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು   

ರಾಯಚೂರು: ಭಗವತ್‍ಭಕ್ತ ಮಂಡಳಿ ಮತ್ತು ನರಸಿಂಹರಾಮ ಪ್ರಭು ಎಜುಕೇಷನ್ ಟ್ರಸ್ಟ್‌ನಿಂದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಮಾಡಿಕೊಂಡು ವಾಪಸ್ಸಾದ ಭಕ್ತಾದಿಗಳಿಗೆ ಅನ್ನದಾಸೋಹ ಹಾಗೂ ಉಚಿತ ವೈದ್ಯಕೀಯ ಸೇವೆಯನ್ನು ಆಯೋಜಿಸಲಾಗಿತ್ತು. ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸೇವೆಯನ್ನು ಉದ್ಘಾಟಿಸಿದರು.

ನಗರದ ನವಚೇತನ ಶಾಲಾ ಆವರಣದಲ್ಲಿ ಆಯೋಜಿಸಿದ್ದ 18ನೇ ವರ್ಷದ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ, ಭಕ್ತಾದಿಗಳಿಗೆ ಅನ್ನಪ್ರಸಾದ ಬಡಿಸುವ ಮೂಲಕ ಚಾಲನೆ ನೀಡಿದರು. ಶ್ರೀಶೈಲ ಜಾತ್ರೆ ಮುಗಿಸಿಕೊಂಡು ಊರಿಗೆ ಮರಳುವ ಭಕ್ತರಿಗೆ ಬೆಳಿಗ್ಗೆ 7ಗಂಟೆಯಿಂದ ಸಂಜೆ 7ಗಂಟೆವರೆಗೆ ನಿರಂತರವಾಗಿ ದಾಸೋಹ ಹಾಗೂ ವೈದ್ಯಕೀಯ ಸೇವೆ ಮಾಡಲಾಯಿತು.

ಭಕ್ತಾದಿಗಳಿಗೆ ಸ್ನಾನ ಮತ್ತು ಪೂಜಾ ಪುನಸ್ಕಾರಕ್ಕೆ ಕೂಡ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತಾಧಿಗಳು ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದರು. ಅಂದಾಜು 35 ಸಾವಿರ ಭಕ್ತರು ದಾಸೋಹದ ಸೌಲಭ್ಯ ಪಡೆದುಕೊಂಡರು ಎಂದು ಆಯೋಜಕರು ತಿಳಿಸಿದರು.

ADVERTISEMENT

ಬಾಗಲಕೋಟ, ವಿಜಯಪುರ, ಬೆಳಗಾವಿ, ಕಲಬುರಗಿ, ಕೊಪ್ಪಳ, ಸೋಲ್ಲಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ಬೆಳಿಗ್ಗೆಯಿಂದಲೇ ಸಂಜೆವರೆಗೂ ವಾಹನಗಳಲ್ಲಿ ತಂಡೋಪ ತಂಡವಾಗಿ ಬರುತ್ತಿದ್ದರು. ದಾಸೋಹ ಹಾಗೂ ವೈದ್ಯಕೀಯ ಸೇವೆ ಒದಗಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಭಕ್ತ ಮಂಡಳಿಯ ಸ್ವಯಂ ಸೇವಕರು ರಸ್ತೆಯಲ್ಲಿ ತೆರಳುತ್ತಿದ್ದ ಭಕ್ತಾದಿಗಳ ವಾಹನಗಳನ್ನು ತಡೆದು ದಾಸೋಹ ಸ್ವೀಕರಿಸಲು ಆಹ್ವಾನಿಸಿದರು. ನಗರಸಭೆ ಕುಡಿಯುವ ನೀರಿನ ವ್ಯವಸ್ಥೆ, ಜೆಸ್ಕಾಂ ವಿದ್ಯುತ್ ವ್ಯವಸ್ಥೆ ಹಾಗೂ ಪೋಲಿಸ್ ಇಲಾಖೆ ಬಂದೋಬಸ್ತ್ ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿತು.

ನವಚೇತನ ಶಾಲಾ ಶಿಕ್ಷಕ-ಶಿಕ್ಷಕಿಯರು ಹಾಗೂ ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಮರೇಶ, ಕಾರ್ಯದರ್ಶಿ ದರೂರ ಬಸವರಾಜ, ಪ್ರಾಚಾರ್ಯ ಅರುಣಾಕುಮಾರಿ, ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು, ಹೋಟೆಲ್ ಮಾಲೀಕರ ಸಂಘ, ಉಲ್ಲಾಸ್ ವಾಕಿಂಗ್‍ ಕ್ಲಬ್, ರೋಟರಿ ಕ್ಲಬ್ ಕಾಟನ್ ಸಿಟಿ ಮತ್ತು ಸೆಂಟ್ರಲ್, ಆಡಿಟರ್ ಅಸೋಸಿಯೇಷನ್, ಗೆಳೆಯರ ಬಳಗ ಹಾಗೂ ಸ್ಥಳೀಯ ಭಗವತ್ ಭಕ್ತ ಮಂಡಳಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದರು.

ಡಾ.ಆನಂದ ಫಡ್ನಿಸ್, ಡಾ.ಸಿ.ಎನ್.ಕುಲಕರ್ಣಿ, ಡಾ.ನಾಗರಾಜ ಭಾಲ್ಕಿ, ಡಾ.ಅಖಿಲ್ ಪ್ರಭು, ಡಾ.ರೂಪಾಬಾಯಿ ನೇತೃತ್ವದಲ್ಲಿ ನಡೆದ ಉಚಿತ ಚಿಕಿತ್ಸಾ ಶಿಬಿರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಸೀರ್ ಹಾಗೂ ನವೋದಯ, ಮಾನ್ವಿ ಆರ್ಯುವೇದ ವೈದ್ಯರು ಸೇವೆ ಸಲ್ಲಿಸಿದರು.

ಚಂಚಲ್ ರಾಜಶ್ರೀ ಫಾರ್ಮಾ ಮುರಾರಿ ಅಗರವಾಲ್, ಅಮರೇಶ್ವರ ಡ್ರಗ್‍ ಹೌಸ್ ಆರ್.ವಿಶ್ವನಾಥ, ರಾಯಚೂರು ಮೆಡಿಕಲ್ ಅನಿಲ ರಂಜಲಕರ್ ಹಾಗೂ ವೆಂಕಟೇಶ ಸ್ನೇಹಿತ್ ಫಾರ್ಮಾ, ಮದನಲಾಲ್ ಸೂರಜ್ ಮೆಡಿಕಲ್ ಸ್ಟೋರ್‌ನಿಂದ ಭಕ್ತರಿಗೆ ಉಚಿತವಾಗಿ ಔಷಧ ವಿತರಣೆ ಮಾಡಲಾಯಿತು.

ಭಗವತ್ ಭಕ್ತ ಮಂಡಳಿ ಮತ್ತು ನರಸಿಂಹ ರಾಮಪ್ರಭು ಎಜುಕೇಷನ್ ಟ್ರಸ್ಟ್ ಮುಖ್ಯಸ್ಥರಾದ ಸದಾನಂದ ಪ್ರಭು, ರಾಮಚಂದ್ರ ಪ್ರಭು, ದಾಮೋದರ ಪ್ರಭು, ಸುಧಾಕರ ಪ್ರಭು, ರವೀಂದ್ರ ಪ್ರಭು, ಅಶೋಕ ಪ್ರಭು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಡಿ.ಆರ್.ನಾರಾಯಣ, ನಗರಸಭೆ ಸದಸ್ಯ ಜಯಣ್ಣ, ಪ್ರಾಚಾರ್ಯ ನರಸಿಂಹಮೂರ್ತಿ, ಪಿ.ಶ್ರೀನಿವಾಸರಾವ್, ಮುಖಂಡರಾದ ಅಸ್ಕಿಹಾಳ ಸುಭಾಷ್, ಕೆ.ಸಿ.ವೀರೇಶ ವಕೀಲ, ರತಿಲಾಲ್ ಪಟೇಲ್, ಸೋಹನ್ ಜೈನ್, ಪ್ರಕಾಶ್ ಕಾಂಕರ್ಯ, ಜಟಲಾಲ್ ಸೇಠ್, ಭೀಮನಗೌಡ ಇಟಗಿ, ನಾಗರಾಜ, ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.