ADVERTISEMENT

ನೈತಿಕತೆಯಿಂದ ಮತ ಚಲಾಯಿಸಿ: ಜಿಲ್ಲಾಧಿಕಾರಿ ಬಿ.ಶರತ್

ರಾಷ್ಟ್ರೀಯ ಮತದಾರರ ದಿನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:51 IST
Last Updated 25 ಜನವರಿ 2019, 13:51 IST
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿದರು
ರಾಯಚೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿದರು   

ರಾಯಚೂರು: ಚುನಾವಣೆ ಸಂದರ್ಭದಲ್ಲಿ ಸೀರೆ, ಟಿವಿ, ಮಿಕ್ಸಿ ಹಾಗೂ ಮದ್ಯ ಸೇರಿದಂತೆ ಯಾವುದೇ ಆಮಿಷಗಳಿಗೂ ಮತದಾರರು ಬಲಿಯಾಗದೆ ನೈತಿಕತೆಯಿಂದ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೇಷ್ಠ ಹಾಗೂ ಪವಿತ್ರವಾದ ಮತದಾನದ ಹಕ್ಕನ್ನು ಅಪವಿತ್ರಗೊಳಿಸಬಾರದು. ಅಪವಿತ್ರಗೊಳಿಸಿದರೆ ನೈತಿಕತೆ ಕಳೆದುಕೊಳ್ಳಬೇಕಾಗುತ್ತದೆ. ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಲು, ದೇಶದಲ್ಲಿ ಬದಲಾವಣೆಗೆ ಹಾಗೂ ಸದೃಢ ದೇಶ ಕಟ್ಟಲು ಮತದಾನ ಮಾಡಬೇಕು ಎಂದರು.

ADVERTISEMENT

18 ವರ್ಷ ತುಂಬಿದ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಯಾವುದೇ ತಾರತಮ್ಯಗಳಿಲ್ಲದೇ ಮತದಾನ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಇಂದಿಗೂ ಜನರು ಮತದಾನದ ಹಕ್ಕಿನ ಮಹತ್ವ ಅರಿತುಕೊಂಡಿಲ್ಲ ಎಂದು ತಿಳಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದೇ ಮತದಿಂದ ಅಭ್ಯರ್ಥಿ ಗೆದ್ದಿರುವ ನಿದರ್ಶನವಿದೆ. ನಗರ ಪ್ರದೇಶದಗಳ ಜನರದಲ್ಲಿ ಮತದಾನದ ಬಗ್ಗೆ ತಾತ್ಸಾರ ಮನೋಭಾವವಿದ್ದು, ಆದ್ದರಿಂದ ತಾತ್ಸಾರ ತೋರದೆ ಮತ ಚಲಾಯಿಸಬೇಕು ಎಂದರು.

ಮತದಾನದ ದಿನದಂದು ಮತಪಟ್ಟಿಯಲ್ಲಿ ಹೆಸರು ಹುಡುಕಿಕೊಂಡು ಮತ ಚಲಾಯಿಸುವುದನ್ನು ಮಾಡಬಾರದು. ಮುಂಚಿತವಾಗಿ ಮತ ಎಲ್ಲಿ ಚಲಾಯಿಸಬೇಕು. ಮತಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಒಳ್ಳೆಯ ಮಾರ್ಗವೆಂದರೆ ಮತ ಚಲಾಯಿಸುವುದಾಗಿದೆ. ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮತ ಚಲಾಯಿಸುವ ಹಕ್ಕು ಎಲ್ಲರಿಗೂ ಇರಲಿಲ್ಲ. ಸ್ವಾತಂತ್ರ್ಯದ ನಂತರ ಸಂವಿಧಾನದ ಮೂಲಕ ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಈ ಹಕ್ಕಿನ ಮಹತ್ವ ಅರಿತುಕೊಂಡು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದೇ ವೇಳೆ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.

ಉಪ ವಿಭಾಗಾಧಿಕಾರಿ ಶಿಲ್ಪಾಶರ್ಮ, ತಹಸೀಲ್ದಾರ ಹಂಪಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ ಇದ್ದರು.

ಜಾಥಾ: ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಬಿ.ಶರತ್‌ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.