
ರಾಯಚೂರು: ‘ನಗರದ ಪೊಲೀಸರು ಕಳ್ಳನೊಬ್ಬನನ್ನು ಬಂಧಿಸಿ ₹36.22 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
‘ಮೇ 20 ಹಾಗೂ ಆ.29ರಂದು ನಗರದ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶದ ಧರ್ಮಾವರಂ ಮೂಲದ ಗುಜ್ಜಲ ರಾಮಕೃಷ್ಣ ಮೂರು ಮನೆಗಳ ಬೀಗ ಮುರಿದು ಮನೆಗಳ ಕಪಾಟಿನಲ್ಲಿ ಇಡಲಾಗಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ’ ಎಂದು ಪೊಲೀಸ್ ಮುಖ್ಯಾಲಯದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮೂರು ಕಡೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ’ ಎಂದು ಹೇಳಿದರು.
‘ಆರೋಪಿ ಧರ್ಮಾವರಂ ಪಟ್ಟಣದಿಂದ ರೈಲಿನಲ್ಲಿ ಬಂದು ನಗರದ ಪ್ರಮುಖ ಪ್ರದೇಶದಲ್ಲಿ ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದ. ನಂತರ ವ್ಯವಸ್ಥಿತ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ. ಆರೋಪಿಯನ್ನು ಬಂಧಿಸುವುದು ಸವಲಾಗಿತ್ತು. ಪೊಲೀಸ್ ಅಧಿಕಾರಿಗಳ ಚಾಣಕ್ಷ್ಯ ನಡೆಯಿಂದ ಆರೋಪಿ ಬಂಧನ ಸಾಧ್ಯವಾಗಿದೆ’ ಎಂದರು.
‘ಮಹಿಳೆಯರು ಸಾರ್ವಜನಿಕ ಪ್ರದೇಶದಲ್ಲಿ ಚಿನ್ನಾಭರಣಗಳನ್ನು ಹಾಕಿಕೊಂಡು ಓಡಾಡಬಾರದು. ಸುರಕ್ಷತೆ ದೃಷ್ಟಿಯಿಂದ ಮನೆಯ ಅಲ್ಮಾರಿಗಳಲ್ಲಿ ಇಟ್ಟುಕೊಳ್ಳಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಶಾಂತವೀರ, ಸೈಬರ್ ಕ್ರೈಮ್ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ, ನಾಗರಾಜ ಮೇಕಾ ಹಾಗೂ ವಿ.ಶ್ವೇತಾ ಉಪಸ್ಥಿತರಿದ್ದರು.