ADVERTISEMENT

ಮಾನ್ವಿ: ಕೂಲಿ ಕಾರ್ಮಿಕರಿಂದ ಕೆಲಸಕ್ಕಾಗಿ ಒಟ್ಟು 31,140 ಅರ್ಜಿಗಳು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 5:33 IST
Last Updated 28 ಮಾರ್ಚ್ 2024, 5:33 IST
ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಐಇಸಿ ಸಂಯೋಜಕ ಈರೇಶ ಕೂಲಿ ಕಾರ್ಮಿಕರಿಂದ ಕೆಲಸದ ಬೇಡಿಕೆಗಳ ಅರ್ಜಿ ಸ್ವೀಕರಿಸಿದರು
ಮಾನ್ವಿ ತಾಲ್ಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಐಇಸಿ ಸಂಯೋಜಕ ಈರೇಶ ಕೂಲಿ ಕಾರ್ಮಿಕರಿಂದ ಕೆಲಸದ ಬೇಡಿಕೆಗಳ ಅರ್ಜಿ ಸ್ವೀಕರಿಸಿದರು   

ಮಾನ್ವಿ: ಕೂಲಿ ಕಾರ್ಮಿಕರಿಂದ ಕೆಲಸಕ್ಕಾಗಿ ಒಟ್ಟು 31,140 ಅರ್ಜಿಗಳು ಸಲ್ಲಿಕೆ ನರೇಗಾ ಯೋಜನೆ ಅಡಿಯಲ್ಲಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರಿಗೆ ನಿರಂತರ ಕೆಲಸ ಒದಗಿಸಿ ಗುಳೆ ಹೋಗುವುದನ್ನು ತಪ್ಪಿಸಲು ಹಮ್ಮಿಕೊಂಡಿರುವ ‘ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನಕ್ಕೆ ತಾಲ್ಲೂಕಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮಾರ್ಚ್ 15 ರಿಂದ ಮೇ ತಿಂಗಳ ಅಂತ್ಯದವರೆಗೆ ಈ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಅಭಿಯಾನದ ಮೂಲಕ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿ ನಾಲಾ ಮತ್ತು ಕೆರೆಗಳ ಹೂಳು ಎತ್ತುವುದು, ಗೋಮಾಳ ಅಭಿವೃದ್ಧಿ ಮತ್ತಿತರ ಕಾಮಗಾರಿಗಳನ್ನು ಕೈಗೊಂಡು ಕೂಲಿಕಾರರಿಗೆ ಉದ್ಯೋಗ ನೀಡಲು ಉದ್ದೇಶಿಸಲಾಗಿದೆ.

ತಾಲ್ಲೂಕು ಪಂಚಾಯಿತಿಯ ನರೇಗಾ ವಿಭಾಗದ ಐಇಸಿ ಸಂಯೋಜಕ ಈರೇಶ ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರ, ತಾಂಡ ರೋಜಗಾರ್ ಮಿತ್ರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಗ್ರಾಮಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅಭಿಯಾನದ ಕುರಿತು ಮಾಹಿತಿ ನೀಡುತ್ತಿದ್ದಾರೆ.

ADVERTISEMENT

ಅಂಗವಿಕಲರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪ ಸಂಖ್ಯಾತರಿಗೂ ಅಭಿಯಾನದ ಲಾಭ ಪಡೆಯಲು ಜನಜಾಗೃತಿ ಮೂಡಿಸಲಾಗುತ್ತಿದೆ. ಅಭಿಯಾನ ಆರಂಭವಾದ ಹತ್ತು ದಿನಗಳಲ್ಲಿ ತಾಲ್ಲೂಕಿನ ಒಟ್ಟು 17 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಉದ್ಯೋಗ ಚೀಟಿ ( ಜಾಬ್ ಕಾರ್ಡ್) ಹೊಂದಿರುವ ಕೂಲಿಕಾರರು ಕೆಲಸಕ್ಕಾಗಿ ಒಟ್ಟು 31,140 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಏಪ್ರಿಲ್ 1 ರಿಂದ ಮೇ ತಿಂಗಳ ಅಂತ್ಯದವರೆಗೂ ಕೂಲಿಕಾರರಿಗೆ ಕೆಲಸ ಒದಗಿಸಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಗ್ರಾಮೀಣ ಪ್ರದೇಶಗಳ ಕೂಲಿ ಕಾರ್ಮಿಕರು ಬೇಸಿಗೆಯಲ್ಲಿ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗದೆ ಈ ಅಭಿಯಾನದ ಲಾಭ ಪಡೆಯಬೇಕು.
ಮಂಜುಳಾ ಹಕಾರಿ ತಾ.ಪಂ ಇಒ ಮಾನ್ವಿ.
ಸರ್ಕಾರದ ನಿಗದಿತ ಗುರಿಗಿಂತ ಹೆಚ್ಚಿನ ಮಾನವ ದಿನಗಳ ಸೃಜನೆ ಮಾಡಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಪೂರ್ವ ಸಿದ್ದತೆ ನಡೆದಿದೆ.
ಖಾಲೀದ್ ಅಹ್ಮದ್ ತಾ.ಪಂ ಸಹಾಯಕ ನಿರ್ದೇಶಕ ಮಾನ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.