ADVERTISEMENT

ಸರ್ಕಾರಿ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ!

ವೈದ್ಯರ ನಿರ್ಲಕ್ಷ್ಯ: ಆಸ್ಪತ್ರೆಯ ನಿರ್ವಹಣೆ ಕೊರತೆ

ಡಿ.ಎಚ್.ಕಂಬಳಿ
Published 18 ಅಕ್ಟೋಬರ್ 2020, 5:47 IST
Last Updated 18 ಅಕ್ಟೋಬರ್ 2020, 5:47 IST
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ   

ಸಿಂಧನೂರು: ‘ಸ್ವಚ್ಛತೆ ಇದ್ದಲ್ಲಿ ರೋಗವಿಲ್ಲ’ ಎಂದು ವೈದರೇ ಹೇಳುತ್ತಾರೆ. ಆದರೆ, ಸಿಂಧನೂರು ತಾಲ್ಲೂಕಿಗೆ ದೊಡ್ಡ ಆಸ್ಪತ್ರೆಯಾಗಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅದಕ್ಕೆ ತದ್ವಿರುದ್ಧವಾಗಿದ್ದು, ರೋಗಗಳನ್ನು ಹರಡುವ ತಾಣವಾಗಿ ಮಾರ್ಪಟ್ಟಿದೆ.

50 ಹಾಸಿಗೆಯಿಂದ 100 ಹಾಸಿಗೆಯಾಗಿ ಮೇಲ್ದರ್ಜೆಗೇರಿ ಏಳೆಂಟು ವರ್ಷ ಕಳೆದರೂ ಇನ್ನೂ ಆಸ್ಪತ್ರೆ ಸುಧಾರಿಸಿಲ್ಲ.

ಪ್ರಸ್ತುತ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿರುವುದರಿಂದ ಪ್ರತಿನಿತ್ಯ ನೂರಾರು ರೋಗಿಗಳು ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆದರೆ ಆಸ್ಪತ್ರೆಯ ಪ್ರವೇಶ ದ್ವಾರದ ಮುಂದೆ ಘನತ್ಯಾಜ್ಯ ವಸ್ತುಗಳನ್ನು ಬಿಸಾಡಿರುವುದರಿಂದ ತಿಪ್ಪೆಗುಂಡಿಯಾಗಿ ಮಾರ್ಪಟ್ಟಿದೆ.

ADVERTISEMENT

ಕಾಂಪೌಂಡ್‍ಗಳ ಒಳಭಾಗದಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿರುವು ದರಿಂದ ಆಸ್ಪತ್ರೆಗೆ ಬರುವ ಜನರು ಇಲ್ಲಿಯೇ ಶೌಚಕ್ಕೆ ತೆರಳುತ್ತಿದ್ದಾರೆ. ಆಸ್ಪತ್ರೆಯ ಹಿಂಭಾಗ ಮತ್ತು ಶವಗಾರದ ಪಕ್ಕದಲ್ಲಿ ಆಸ್ಪತ್ರೆಯಲ್ಲಿ ಉಪಯೋಗಿಸಿದ ವಸ್ತುಗಳನ್ನು ಆಹಾರ ತ್ಯಾಜ್ಯವನ್ನು ಎಸೆಯಲಾಗಿದೆ. ಈ ಎಲ್ಲ ವಸ್ತುಗಳನ್ನು ಬರ್ನಿಂಗ್ ಪಾಯಿಂಟ್‍ನಲ್ಲಿ ಸುಡದೆ, ಎಲ್ಲೆಂದರಲ್ಲಿ ಸುಡಲಾಗುತ್ತಿದೆ. ಪಕ್ಕದಲ್ಲಿ ಜನರೇಟರ್‌ಗಳಿದ್ದು, ಸ್ಪಲ್ಪ ಬೆಂಕಿ ತಗುಲಿದರೂ ದೊಡ್ಡ ಪ್ರಮಾದ ಸಂಭವಿಸುವ ಆಪಾಯವಿದೆ.

ನಿರ್ವಹಣೆ ಇಲ್ಲ: ತಾಲ್ಲೂಕಿಗೆ ದೊಡ್ಡ ಆಸ್ಪತ್ರೆ ಎನಿಸಿಕೊಂಡಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಎಲ್ಲೆಂದರಲ್ಲಿ ಉಗುಳಿದ ಕಲೆಗಳು ಕಾಣುತ್ತಿದೆ. ಆಸ್ಪತ್ರೆಯಲ್ಲಿರುವ ಒಂದೇ ಶೌಚಾಲಯದ ಪರಿಸ್ಥಿತಿಯಂತೂ ಹೇಳತೀರದು. ಸಮರ್ಪಕ ನೀರು ಪೂರೈಕೆ ಇಲ್ಲದಿರುವರಿಂದ ಸಂಪೂರ್ಣವಾಗಿ ಹದಗೆಟ್ಟು ದುರ್ವಾಸನೆ ಬೀರುತ್ತಿದೆ.

ಪಕ್ಕದಲ್ಲಿಯೇ ಗರ್ಭಿಣಿಯರ ಕೋಣೆಯಿದ್ದು, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯ ವೈದ್ಯಾಧಿಕಾರಿ ತಲೆಕೆಡಿಸಿಕೊಂಡಿಲ್ಲ ಎಂಬುದು ರೋಗಿಗಳ ದೂರಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಿಲ್ಲ. ಯಾವ ಚಿಕಿತ್ಸೆಗೆ ಯಾವ ಕೊಠಡಿಗೆ ತೆರಳಬೇಕೆಂಬುದರ ಮಾಹಿತಿಯನ್ನು ಸಹ ಆಸ್ಪತ್ರೆಯ ಸಿಬ್ಬಂದಿ ನೀಡುತ್ತಿಲ್ಲ. ಬೇಕಾಬಿಟ್ಟಿಯಂತೆ ವೈದ್ಯರು ತಪಾಸಣೆ ನಡೆಸಿ, ಔಷಧಗಳನ್ನು ಹೊರಗಡೆ ತೆಗೆದುಕೊಂಡು ಬರುವಂತೆ ಚೀಟಿ ಬರೆದು ಕೊಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ವೈದ್ಯಾಧಿಕಾರಿ ಡಾ.ಸುರೇಶ ಗೌಡ ಅವರು, ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಬೇಕು.ಸಮಯಕ್ಕೆ ಸರಿಯಾಗಿ ವೈದ್ಯರು ಕಾರ್ಯನಿರ್ವಹಿಸುವಂತೆ ಮತ್ತು ಆಸ್ಪತ್ರೆ ಸುತ್ತಲೂ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮವಹಿಸಬೇಕು ಎಂದು ಜನರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.