ADVERTISEMENT

ಆದಿವಾಸಿ ಜನರ ಅಭಿವೃದ್ಧಿಗೆ ಸ್ಪಂದಿಸಲಾಗುವುದು: ಬಿ.ಎಸ್. ಯಡಿಯೂರಪ್ಪ

ಆದಿವಾಸಿ ಸಂಸ್ಕೃತಿ ಸಮಾವೇಶ ಉದ್ಘಾಟಿಸಿದ ಸಿಎಂ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 14:12 IST
Last Updated 13 ಜನವರಿ 2020, 14:12 IST
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕನಕ ಗುರುಪೀಠದಲ್ಲಿ ಸೋಮವಾರ ಆಯೋಜಿಸಿದ್ದ ಆದಿವಾಸಿ ಸಂಸ್ಕೃತಿ ಸಮಾವೇಶವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದರು
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಕನಕ ಗುರುಪೀಠದಲ್ಲಿ ಸೋಮವಾರ ಆಯೋಜಿಸಿದ್ದ ಆದಿವಾಸಿ ಸಂಸ್ಕೃತಿ ಸಮಾವೇಶವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದರು   

ರಾಯಚೂರು: ಆದಿವಾಸಿ, ಬುಡಕಟ್ಟು ಜನರು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕನಕ ಗುರುಪೀಠ ಮಠದ ಆಶಯಕ್ಕೆ ಪೂರಕವಾಗಿ ಸರ್ಕಾರದಿಂದ ಮುಂಬರುವ ದಿನಗಳಲ್ಲಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ದೇವದುರ್ಗ ತಾಲ್ಲೂಕಿನ ತಿಂಥಿಣಿ ಬ್ರಿಡ್ಜ್‌ ಪಕ್ಕದ ಕನಕ ಗುರುಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಆದಿವಾಸಿ ಸಂಸ್ಕೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಮುದಾಯವನ್ನು ಧಾರ್ಮಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕವಾಗಿ ಮುನ್ನಡೆಸುವ ಕೆಲಸವನ್ನು ಕನಕಗುರು ಪೀಠ ಮಾಡುವುದು ಶ್ಲಾಘನೀಯ. ಆದಿವಾಸಿ ಅಭಿವೃದ್ದಿ ನಿಗಮ ಆಗಬೇಕು ಎಂಬುದನ್ನು ಪೀಠದಿಂದ ಬೇಡಿಕೆ ಸಲ್ಲಿಸಲಾಗಿದೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ADVERTISEMENT

ಹಾಲುಮತ ಸಮಾಜದ ಮುಖಂಡ ಕೆ.ವಿರೂಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಮಕರ ಸಂಕ್ರಮಣದ ಸಂದರ್ಭದಲ್ಲಿ ಗುರುಪೀಠದಲ್ಲಿ ಮೂರು ದಿನಗಳ ಕಾಲ ಸಂಭ್ರಮದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ವರ್ಷ ಹಾಲುಮತ- ಗಂಗಾಮತ ಸಮಾವೇಶ ಏರ್ಪಡಿಸಿದ್ದು ವಿಶೇಷವಾಗಿದೆ ಎಂದರು.

ಸಮಾಜದಲ್ಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಎಲ್ಲಾ ಜನಾಂಗಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕನಕಗುರು ಪೀಠ ಮಾಡುತ್ತಿದೆ. ಆದಿವಾಸಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ.ಎಲ್ಲಾ ಸಮಾಜಗಳು ಒಟ್ಟಾಗಿ ಹೋಗಬೇಕಿದ್ದರೆ, ಜಾತಿ, ಜಾತಿಗಳ ಮಧ್ಯೆ ಕಲಹ ಹೋಗಲಾಡಿಸಬೇಕಿದೆ. ಈ ಮಠದಿಂದ ಅಂತಹ ಕಾರ್ಯ ನಡೆಯುತ್ತಿದೆ. ಸಾಮರಸ್ಯ ಮೂಡಿಸುವುದು ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.

ಕನಕ ಗುರುಪೀಠದ ಸಿದ್ದರಮಾನಂದ ಪುರಿ ಸ್ವಾಮೀಜಿ ಮಾತನಾಡಿ, ಕನಕಗುರು ಪೀಠಕ್ಕೆ ಪ್ರಥಮವಾಗಿ ಸರ್ಕಾರದಿಂದ ₹1 ಕೋಟಿ ಅನುದಾನವನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಟ್ಟಿದ್ದರು. ಅದರಿಂದ ಸುಸಜ್ಜಿತ ಶಾಲೆಯೊಂದನ್ನು ನಿರ್ಮಿಸಲು ಸಾಧ್ಯವಾಗಿದೆ. ಈಗ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರಸಾದ ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡುವ ನಿಟ್ಟಿನಲ್ಲಿ ಮತ್ತೆ ಅನುದಾನ ಒದಗಿಸಲಿದ್ದಾರೆ ಎನ್ನುವ ಆಶಯವಿದೆ ಎಂದರು.

ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಆದಿವಾಸಿಗಳನ್ನು ಪ್ರಾಣಿಗಳಂತೆ ದುಡಿಸಿಕೊಳ್ಳುತ್ತಿದ್ದಾರೆ.ಅತಿಸೂಕ್ಷ್ಮ ಸಮುದಾಯಗಳ ಪರವಾಗಿ ಆದಿವಾಸಿ ಬುಡಕಟ್ಟು ಅಭಿವೃದ್ಧಿ ನಿಗಮ ಆಗಲೇಬೇಕಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಕೆಲಸವನ್ನು ಕನಕಗುರು ಮಾಡುತ್ತಿದೆ. ಸರ್ಕಾರದಿಂದ ಪೀಠದ ಬೇಡಿಕೆಗಳಿಗೆ ಹೆಚ್ಚು ಆದ್ಯತ‌ ನೀಡಬೇಕು ಎಂದು ಕೋರಿದರು.

ಮಾಜಿ ಶಾಸಕ ಎಚ್.ವಿಶ್ವನಾಥ್ ಮಾತನಾಡಿ, ಕೃತಜ್ಞತೆ ಹಾಗೂ ನಿಯತ್ತಿನ ಜನನಾಯಕ ಎಂದು ಯಡಿಯೂರಪ್ಪ ಪ್ರಖ್ಯಾತರಾಗಿದ್ದಾರೆ. ಸದ್ಯ ನಾಲ್ಕನೇ ಭಾರಿ ಮುಖ್ಯಮಂತ್ರಿ ಆಗಿದ್ದು, ಹಾಲುಮತ ಸಂಸ್ಕೃತಿಯ ಕೊಡುಗೆ ಅವರಿಗೆ ಬಹಳಷ್ಟಿದೆ. ನನ್ನನ್ನು ಸೇರಿದಂತೆ ಬೈರತಿ ಬಸವರಾಜ, ಶಂಕರ ಹಾಗೂ ಎಂ.ಟಿ.ಬಿ. ನಾಗರಾಜ ಹಾಲುಮತದ ಶಾಸಕರು ತಮ್ಮ‌ಸ್ಥಾನ ತ್ಯಜಿಸಿ ಯಡಿಯೂರಪ್ಪ ಅವರನ್ನು‌ ಬೆಂಬಲಿಸಿದ್ದಾರೆ. ಸಮಾಜದ ಅಭಿವೃದ್ಧಿಗಾಗಿ ಎಲ್ಲ ಮುಖ್ಯಮಂತ್ರಿಗಳು ಅನುದಾನ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರು ಅತಿಹೆಚ್ಚು ಅನುದಾನ ಒದಗಿಸಿದ್ದಾರೆ ಎಂದು ಹೇಳಿದರು.

ತಿಂಥಣಿ ಬ್ರಿಡ್ಜ್ ಕನಕಗುರು ಪೀಠದಿಂದ ಮಹತ್ವದ ಬೇಡಿಕೆಯಾದ ಆದಿವಾಸಿ ಅಭಿವೃದ್ಧಿ ನಿಗಮ ಆರಂಭಿಸಬೇಕು. ಅಲೆಮಾರಿ, ಆದಿವಾಸಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕಿದೆ. ಈ ಭಾಗದಲ್ಲಿ ಗೊಂಡ, ಕುರುಬ ಗೊಂಡ ಪ್ರಮಾಣಪತ್ರ ಕೊಡುವ ವ್ಯವಸ್ಥೆ ಮಾಡಬೇಕು. ಈ ಗೊಂದಲವನ್ನು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ಆದಿವಾಸಿ ನಿಗಮ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎನ್ನುವ ಆಶಾಭಾವವಿದೆ ಎಂದರು.

ಮೈಸೂರು ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಶಾಸಕ ಡಾ.ಶಿವರಾಜ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶರಣಪ್ಪ ಜಾಡಲದಿನ್ನಿ, ಮುಖಂಡರಾದ ಪ್ರತಾಪಗೌಡ ಪಾಟೀಲ, ಮಾನಪ್ಪ ವಜ್ಜಲ್‌, ತ್ರಿವಿಕ್ರಮ ಜೋಶಿ, ಎನ್‌.ಶಂಕ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.