ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ರೋಗಿಗಳು!

ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಖಾಸಗಿ ಆಸ್ಪತ್ರೆಗಳಿಂದ ಬಂದ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:23 IST
Last Updated 17 ಜೂನ್ 2019, 14:23 IST
ರಾಯಚೂರಿನ ಡಾಕ್ಟರ್‌ಲೇನ್‌ ಮಾರ್ಗದ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಮವಾರ ಸೇವೆ ಸ್ಥಗಿತಗೊಳಿಸಿದ್ದರು
ರಾಯಚೂರಿನ ಡಾಕ್ಟರ್‌ಲೇನ್‌ ಮಾರ್ಗದ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಮವಾರ ಸೇವೆ ಸ್ಥಗಿತಗೊಳಿಸಿದ್ದರು   

ರಾಯಚೂರು:ಕೋಲ್ಕತ್ತಾದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಘಟನೆಯನ್ನು ವಿರೋಧಿಸಿ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಸೋಮವಾರ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ವೈದ್ಯರ ಸಂಘದ ಕೇಂದ್ರ ಸಮಿತಿಯ ಕರೆಯ ಮೇರೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ 6 ಗಂಟೆಯಿಂದ ಸೇವೆ ಸ್ಥಗಿತಗೊಂಡಿತ್ತು. ಪ್ರಯೋಗಾಲಯಗಳು ಕೂಡ ಸೇವೆ ಸ್ಥಗಿತಗೊಳಿಸಿದ್ದವು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ಲಭ್ಯವಿದ್ದರಿಂದ ಜಿಲ್ಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ದೊಡ್ಡ ಪ್ರಮಾಣದಲ್ಲಿ ಯಾವುದೇ ಸಮಸ್ಯೆಗಳು ಆಗಲಿಲ್ಲ.

ಖಾಸಗಿ ವೈದ್ಯರ ಮುಷ್ಕರದ ಮಾಹಿತಿಯಿಲ್ಲದೇ ರೋಗಿಗಳು ಆಸ್ಪತ್ರೆಗೆ ಬಂದು ವಾಪಸ್ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಲಭ್ಯವಿದ್ದರಿಂದ ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಕಂಡುಬಂದಿಲ್ಲ.

ADVERTISEMENT

ಸಂಘದ ಕಚೇರಿಯಲ್ಲಿ ಅಧ್ಯಕ್ಷ ಬಿ.ಮಹಾಲಿಂಗಪ್ಪ, ಕಾರ್ಯದರ್ಶಿ ಡಾ.ಅನಿರುದ್ಧ ಕುಲಕರ್ಣಿ, ಡಾ.ಸುರೇಶ ಸಗರದ, ಡಾ.ಶ್ರೀಧರರೆಡ್ಡಿ, ಡಾ.ಶಿವಪ್ಪ ಮಾಲಿಪಾಟೀಲ್, ಡಾ.ಶ್ರೀಧರ ವೈಟ್ಲಾ, ಡಾ.ಸತ್ಯಕುಮಾರ, ಡಾ.ಸಿ.ಎನ್.ಕುಲಕರ್ಣಿ, ಡಾ.ಮಲ್ಲೇಶಗೌಡ ಸೇರಿದಂತೆ ಇತರರು ಮುಷ್ಕರದಲ್ಲಿ ಪಾಲ್ಗೊಂಡರು.

ರಿಮ್ಸ್‌ನಲ್ಲಿ ಹೆಚ್ಚುವರಿ ರೋಗಿಗಳು:

ರಿಮ್ಸ್‌ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಸೋಮವಾರ ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಸಾಮಾನ್ಯ ದಿನಗಳಿಗಿಂತ ಸೋಮವಾರದಂದು ಶೇ 15ರಷ್ಟು ಹೆಚ್ಚಿನ ರೋಗಿಗಳು ಒಪಿಡಿ ಚಿಕಿತ್ಸೆ ಪಡೆದಿದ್ದಾರೆ. 1,200 ರೋಗಿಗಳು ಚಿಕಿತ್ಸೆ ಪಡೆದಿದ್ದು, 100 ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 15 ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ರಿಮ್ಸ್‌ ಆಸ್ಪತ್ರೆ ನಿರ್ದೇಶಕ ಡಾ. ಬಸವರಾಜ ಪಿರಾಪುರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.