ADVERTISEMENT

ಸಿರವಾರ: ಅದ್ದೂರಿಯಾಗಿ ನಡೆದ ಹಾಲುಗಂಬ ಉತ್ಸವ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:42 IST
Last Updated 21 ಡಿಸೆಂಬರ್ 2025, 6:42 IST
ಸಿರವಾರದಲ್ಲಿ ಶನಿವಾರ ಹಾಲುಗಂಬ ಉತ್ಸವ ನೋಡಲು ನೆರೆದಿದ್ದ ಭಕ್ತರು 
ಸಿರವಾರದಲ್ಲಿ ಶನಿವಾರ ಹಾಲುಗಂಬ ಉತ್ಸವ ನೋಡಲು ನೆರೆದಿದ್ದ ಭಕ್ತರು    

ಸಿರವಾರ: ಪಟ್ಟಣದ ಬಯಲು ಆಂಜನೇಯ ದೇವಸ್ಥಾನದ ಹಾಲುಗಂಬ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು.

ಬಯಲು ಆಂಜನೇಯ ಸ್ವಾಮಿಯ ಎಳ್ಳ ಅಮವಾಸ್ಯೆ ಜಾತ್ರೆ ಮರುದಿನ ನಡೆಯುವ ಓಕುಳಿ ಅಂಗವಾಗಿ ನಡೆದ ಹಾಲುಗಂಬ ಹತ್ತುವ ಸ್ಪರ್ಧೆಯಲ್ಲಿ ಚಿಕ್ಕ ಮಕ್ಕಳು, ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಒಂದು ಗಂಟೆಗೂ ಅಧಿಕ ಸಮಯ ಹಾಲುಗಂಬ ಉತ್ಸವ ಸ್ಪರ್ಧೆ ನಡೆಯಿತು. ಒಬ್ಬರ ಮೇಲೆ ಒಬ್ಬರು ಹಾಲುಗಂಬ ಹತ್ತುತ್ತಾ ಕೆಳಗೆ ಜಾರಿ ಬೀಳುವ ದೃಶ್ಯಗಳನ್ನು ಕಂಡು ನೆರೆದಿದ್ದ ಯುವಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಸ್ಪರ್ಧಾಳುಗಳನ್ನು ಹುರಿದುಂಬಿಸುತ್ತಿದ್ದರು.

ADVERTISEMENT

ಗಂಗಾಮತಸ್ಥರು ಎರಚುತ್ತಿದ್ದ ನೀರಿನ ರಸಭಸಕ್ಕೆ ಕಂಬ ಹತ್ತಲು ಹರಸಾಹಸ ಪಡುವಂತಾಯಿತು. ಸತತ ಮೂರನೇ ಬಾರಿಗೆ ಯುವಕ ವೀರೇಶ ಆದೆಪ್ಪ ಚಿನ್ನಾನ್ ಕಂಬ ಹತ್ತುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಶಂಕರ ದ್ವಿತೀಯ ಸ್ಥಾನ ಪಡೆದರು.
ಮಾಜಿ ಶಾಸಕ ರಾಜಾವೆಂಕಟಪ್ಪ ಅವರು ಪ್ರಥಮ ಸ್ಥಾನಕ್ಕೆ 5 ತೊಲೆ, ದ್ವಿತೀಯ ಸ್ಥಾನಕ್ಕೆ 2.5 ತೊಲೆ ಬೆಳ್ಳಿ ಕಡಗ ನೀಡಿ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂತನವಾಗಿ ತಯಾರಿಸಿದ ಹಾಲುಗಂಬವನ್ನು ಪಟ್ಟಣದ ಬಸವ ವೃತ್ತದಿಂದ ಬಯಲು ಆಂಜನೇಯ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ತಂದು ಸ್ಥಾಪಿಸಲಾಯಿತು. ಶನಿವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಆಂಜನೇಯ ಮೂರ್ತಿಗೆ ಎಲೆ ಪೂಜೆ, ಅಭಿಷೇಕ ಜೊತೆಗೆ ವಿಶೇಷ ಪೂಜೆಗಳು ನಡೆದವು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದರು. 

ಸಿರವಾರದಲ್ಲಿ ಶನಿವಾರ ಹಾಲುಗಂಬವನ್ನು ವೀರೇಶ ಮೊದಲಿಗನಾಗಿ ಹತ್ತುವ ಮೂಲಕ ವಿಜೇತರಾದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.