ADVERTISEMENT

ಮಾರ್ಚ್ 3ರಂದು ಸ್ಮಶಾನ ಸ್ವಚ್ಛತಾ ಆಂದೋಲನ: ವಿಜಯ ಲಕ್ಕುಂಡಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 9:41 IST
Last Updated 29 ಫೆಬ್ರುವರಿ 2020, 9:41 IST

ರಾಯಚೂರು: ಡಾ.ನಾನಾ ಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಮಾರ್ಚ್ 3 ರಂದು ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ನಾಲ್ಕು ಸ್ಮಶಾನಗಳ ಸ್ವಚ್ಛತಾ ಆಂದೋಲನಾ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕ ವಿಜಯ ಲಕ್ಕುಂಡಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅಲಿಭಾಗ ತಾಲ್ಲೂಕಿನ ರೇವದಂಡ ಗ್ರಾಮದಿಂದ ಪ್ರತಿಷ್ಠಾನ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ವೃಕ್ಷಾರೋಪಣ ಮತ್ತು ಬೆಳವಣಿಗೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ರೈತರ ಕೊಳವೆಬಾವಿ ಮರುಪೂರಣ, ಬಡ ಮಕ್ಕಳ ವಿದ್ಯಾಭ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯ ಮಾಡುತ್ತಿದೆ ಎಂದರು.

ಪ್ರತಿಷ್ಠಾನ ಯಾವುದೇ ಜಾತಿ, ಮತ, ಭೇದವಿಲ್ಲದೇ, ಯಾವುದೇ ಫಲಾಪೇಕ್ಷವೂ ಇಲ್ಲದೇ ಉಚಿತವಾಗಿ ಸೇವೆ ಮಾಡುತ್ತಿದೆ. ಜೊತೆಗೆ ಮಳೆನೀರು ಕೊಯ್ಲು, ಪಾಠ–ಪ್ರವಚನ, ಪರಿಸರ ಕಾರ್ಯ, ವೃದ್ದರಿಗೆ ಜೀವನಾವಶ್ಯಕಗಳ ಪೂರೈಕೆ ಸೇರಿ ಹಲವಾರು ಸಮಾಜಮುಖಿ ಕಾರ್ಯ ಮಾಡುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಲಿಮ್ಕಾ ಬುಕ್ ಟಾ ರೆಕಾರ್ಡ್ಸ್‌ನಲ್ಲಿ ಸಹ ಹೆಸರು ದಾಖಲಿಸಿದ್ದು ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳಿಗೂ ಪ್ರತಿಷ್ಠಾನ ಭಾಜವಾಗಿದೆ ಎಂದು ತಿಳಿಸಿದರು.

ADVERTISEMENT

ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಮಶಾನ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದು ಮಾರ್ಚ್ 3 ರಂದು ರಾಯಚೂರಿನ ರೇಲ್ವೆ ಸ್ಟೇಷನ್ ಹತ್ತಿರ ಎರಡು ಕ್ರಿಶ್ಚಿಯನ್ ರುದ್ರಭೂಮಿ, ನಂದೀಶ್ವರ ಮಂದಿರ ಹತ್ತಿರ, ಕಾಳಿದಾಸ ನಗರದ ರುದ್ರಭೂಮಿ ಸೇರಿದಂತೆ ಒಟ್ಟು 4 ಕಡೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ಪ್ರತಿಷ್ಠಾನದ ಮುಖಂಡರಾದ ಅಕ್ಷಯ, ಅರವಿಂದ, ಬಸವರಾಜ, ರಾಜೇಶ ಮಹೇಂದ್ರಕರ್, ಶಿವಣ್ಣ, ಡಾ.ಬಿರಾದಾರ ‍ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.